ಮಡಿಕೇರಿ ಮೇ 13 NEWS DESK : ಜಿಲ್ಲೆಯಲ್ಲಿ ಇದೀಗ ಪೂರ್ವ ಮುಂಗಾರು ಮಳೆ ಪ್ರಾರಂಭವಾದ ಹಿನ್ನೆಲೆ ಕಲುಷಿತ ಕುಡಿಯುವ ನೀರಿನ ಸೇವನೆಯಿಂದ ಕಾಲರಾ, ಶೀತ-ಜ್ವರ, ಕೆಮ್ಮು, ವಾಂತಿ, ಬೇದಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳು, ಡಾಬಾ, ಸ್ವೀಟ್ ಸ್ಟಾಲ್, ಬೇಕರಿ, ಚಾಟ್ಸ್, ಮೆಸ್, ಕ್ಯಾಂಟೀನ್, ಕ್ಯಾಟರಿಂಗ್, ಸಮುದಾಯ ಭವನ, ಕಲ್ಯಾಣ ಮಂಟಪದವರು, ಪೇಯಿಂಗ್‍ಗೆಸ್ಟ್, ಹೋಮ್-ಸ್ಟೇ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ರೆಸಾರ್ಟ್, ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ, ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯ ಮತ್ತು ಎಲ್ಲಾ ಆಹಾರ ತಯಾರಿಕಾದಾರರು ಸಾರ್ವಜನಿಕರ/ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಕಡ್ಡಾಯವಾಗಿ ಗ್ರಾಹಕರಿಗೆ ಕುದಿಸಿದ ಶುದ್ಧವಾದ ನೀರು ನೀಡುವಂತೆ ಸೂಚಿಸಿದೆ.
ಸೊಳ್ಳೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವಂತೆ, ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಮತ್ತು ತಯಾರಿಸಿರುವ ಎಲ್ಲಾ ಆಹಾರ ಪದಾರ್ಥಗಳನ್ನು ಸೂಕ್ತ ರಿತಿಯಲ್ಲಿ ಮುಚ್ಚಿಟ್ಟು ಸ್ವಚ್ಚವಾದ ವಿಧಾನದ ಮೂಲಕ ತಯಾರಿಕೆ ಮತ್ತು ವಿತರಣೆ ಮಾಡುವಂತೆ ತಿಳಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪರಿವೀಕ್ಷಣೆ ಸಂದರ್ಭದಲ್ಲಿ ಕೆಲವು ಕಲ್ಯಾಣ ಮಂಟಪಗಳ ಕುಡಿಯುವ ನೀರಿನ ಆಹಾರ ಮಾದರಿಗಳನ್ನು ಕಾಯ್ದೆಯಡಿ ನೋಂದಾಯಿತವಾಗಿರುವ ಪ್ರಯೋಗಾಲಯಗಳಿಗೆ ಸೂಕ್ಷ್ಮಾಣು ವಿಶ್ಲೇಷಣೆ (Microbiological Analysis) ಕಳುಹಿಸಲಾಗಿ ಕೆಲವು ಕಲ್ಯಾಣ ಮಂಟಪಗಳ ನೀರು ಕುಡಿಯಲು ಯೋಗ್ಯವಿಲ್ಲವೆಂಬುದಾಗಿ ವರದಿ ಸ್ವೀಕೃತವಾಗಿದೆ.
ಆದ್ದರಿಂದ ಎಲ್ಲಾ ಆಹಾರ ತಯಾರಿಕಾದಾರರು, ಆಹಾರ ತಯಾರಿಕೆಯ ಎಲ್ಲಾ ಹಂತಗಳಲ್ಲಿ ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರ ತಯಾರಿಕೆಗೆ ಬಳಸುವ ನೀರನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ನೋಂದಾಯಿತವಾಗಿರುವ ಪ್ರಯೋಗಾಲಯಗಳಿಗೆ ಪ್ರತೀ ಆರು ತಿಂಗಳಿಗೆ ಒಮ್ಮೆ ಖುದ್ದು ವಿಶ್ಲೇಷಣೆಗಾಗಿ ಕಳುಹಿಸಲು ಸೂಚಿಸಿದೆ.
ಹಾಗೆಯೇ ಎಲ್ಲಾ ವರ್ಗದವರು ಕಡ್ಡಾಯವಾಗಿ ಆಹಾರ ನೋಂದಣಿ/ ಪರವಾನಗಿಯನ್ನು ಪಡೆಯುವುದು, ತಪ್ಪಿದಲ್ಲಿ ಕಾಯ್ದೆಯಡಿ ನೋಟೀಸ್ ಮತ್ತು ದಂಡ ವಿಧಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ಇ.ಅನಿಲ್ ಧಾವನ್ ಎಚ್ಚರಿಸಿದ್ದಾರೆ.