ಸೋಮವಾರಪೇಟೆ ಮೇ 16 NEWS DESK : ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ನಡೆದ ಅಪ್ರಾಪ್ತೆ ಮೀನಾ (16) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮೃತೆಯ ಕುಟಂಬದವರನ್ನು ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ, ಹತ್ಯೆ ಆರೋಪಿ ಪ್ರಕಾಶನಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಎಲ್ಲಾ ರೀತಿಯ ಕ್ರಮ ತೆಗದುಕೊಳ್ಳಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರದಿಂದ ವಿಶೇಷ ಅಭಿಯೋಜಕರನ್ನು ನೇಮಿಸಿ, ವಿಶೇಷ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು. ಇಂತಹ ಘೋರ ಕೃತ್ಯ ನಡೆಸುವವರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ಪ್ಲಾಸ್ಟಿಕ್ ಹೊದಿಕೆಯ ಗುಡಿಸಿನ ಒಳಗೆ ಮೃತಳ ತಂದೆ, ತಾಯಿ, ಸಹೋದರ, ಸಹೋದರಿಯೊಂದಿಗೆ ಮಾತಾನಾಡಿದ ಗೃಹಸಚಿವರು ಸಂಕಷ್ಟವನ್ನು ಕೇಳಿ ಮರುಗಿದರು. ವೈಯುಕ್ತಿಕವಾಗಿ ಧನ ಸಹಾಯ ಮಾಡಿದರು. ಚುನಾವಣಾ ನೀತಿ ಸಂಹಿತೆಯಿರುವ ಕಾರಣ ಸಧ್ಯಕ್ಕೆ ಏನನ್ನು ಹೇಳಲು ಸಾಧ್ಯವಿಲ್ಲ. ಚುನಾವಣೆ ಮುಗಿದ ನಂತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.
ಶಾಸಕ ಎಚ್.ಡಿ.ರೇವಣ್ಣ ಹಾಗೂ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಗರಂ ಆದ ಗೃಹಸಚಿವರು, ಇಲ್ಲಿಗೆ ಬಂದಿರುವುದು ಅಪ್ರಾಪ್ತೆಯ ಕೊಲೆಯಿಂದ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಲು. ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಹೊರನಡೆದು ಗ್ರಾಮಸ್ಥರೊಂದಿಗೆ ಚರ್ಚಿಸಲು ಮುಂದಾದರು.
ಗೃಹ ಸಚಿವರ ಭೇಟಿ ಸಂದರ್ಭ ಶಾಸಕ ಮಂತರ್‌ಗೌಡ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರ್‌ನಾಥ್, ಡಿಜಿಪಿ ಅಮಿತ್‌ಸಿಂಗ್, ಎಸ್.ಪಿ.ರಾಮರಾಜನ್, ಡಿವೈಎಸ್‌ಪಿ ಗಂಗಾಧರಪ್ಪ, ಡಿಸಿಸಿ ಮಹಿಳಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಬಿ.ಸತೀಶ್, ವಿ.ಪಿ.ಶಶಿಧರ್, ಪ್ರಮುಖರಾದ ಮನು ಮೇದಪ್ಪ, ಮಾದಪುರ ಹರೀಶ್ ಕೆ.ಎ.ಯಾಕುಬ್, ಶೀಲಾ ಡಿಸೋಜ, ಎಚ್.ಆರ್.ಸುರೇಶ್, ಕೆ.ಎ.ಆದಂ, ಮತ್ತಿತರರು ಇದ್ದರು.