ಮಡಿಕೇರಿ ಮೇ 18 NEWS DESK : ಶಿಕ್ಷಕರೇ ಅಲ್ಲದವರು, ರಾಜಕಾರಣಿಗಳು, ಕೆಲವು ಸಂದರ್ಭಗಳಲ್ಲಿ ಪದವಿಯನ್ನೇ ಪಡೆಯದವರು ಸುಶಿಕ್ಷಿತ ಮತದಾರರ ಕ್ಷೇತ್ರದಿಂದ ಚುನಾಯಿತರಾಗುತ್ತಿರುವುದು ವಿಪರ್ಯಾಸ ಎಂದು ವಿಧಾನ ಪರಿಷತ್ ನ ನೈಋತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಶಸ್ತ್ರ ಚಿಕಿತ್ಸಾ ತಜ್ಞ ಹೆಬ್ರಿಬೀಡುವಿನ ಡಾ.ನರೇಶ್ಚಂದ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ 3 ರಂದು ನಡೆಯುವ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿದ್ದೇನೆ. ಈ ಬಾರಿ ಮತದಾರರು ವಿದ್ಯಾವಂತರನ್ನು ಬಹುಮತದಿಂದ ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನೈಋತ್ಯ ಶಿಕ್ಷಕರ ಕ್ಷೇತ್ರ ಅತ್ಯಂತ ಸುಶಿಕ್ಷಿತ ಮತದಾರರ ಕ್ಷೇತ್ರವಾಗಿದೆ. ಇಲ್ಲಿನ ಮತದಾರರು ಕನಿಷ್ಠ ಎರೆಡೆರಡು ಪದವಿಗಳನ್ನು ಪಡೆದಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರ ರಚನೆಯಾದ ಬಳಿಕ ಎಲ್ಲೋ ಒಂದೆರಡು ಸಂದರ್ಭದಲ್ಲಿ ಮಾತ್ರ ಪದವೀದರರು, ಸುಶಿಕ್ಷಿತರು ಆಯ್ಕೆಯಾಗಿದ್ದಾರೆ. ಅರ್ಹರು ವಿಧಾನ ಪರಿಷತ್ ಪ್ರವೇಶ ಮಾಡಬೇಕು ಎನ್ನುವುದು ನನ್ನ ಉದ್ದೇಶ ಎಂದರು. ಸುಮಾರು 22 ಸಾವಿರಕ್ಕೂ ಅಧಿಕ ಮಂದಿ ಶಿಕ್ಷಕರು ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಐದು ಪೂರ್ತಿ ಕಂದಾಯ ಜಿಲ್ಲೆಗಳು ಹಾಗೂ ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳು ಈ ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿವೆ. ಕರಾವಳಿ, ಮಲೆನಾಡು ಮತ್ತು ಬಯಲುಸೀಮೆ ಮೂರೂ ರೀತಿಯ ಭೌಗೋಳಿಕ ವಿಭಾಗಗಳನ್ನು ನೈರುತ್ಯ ಶಿಕ್ಷಕರ ಕ್ಷೇತ್ರವು ಒಳಗೊಂಡಿದೆ. ಓರ್ವ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞನಾಗಿ ಹದ್ರೋಗ ಮತ್ತು ತತ್ಸಂಬಂಧಿ ವಿಷಯಗಳ ಒಟ್ಟು ಇಪ್ಪತ್ತು ವಿಧದ ಬಹು ಸಂಕೀರ್ಣ ಶಸ್ತç ಚಿಕಿತ್ಸೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಮಾಡಿ ರೋಗಿಗಳಿಗೆ ಜೀವದಾನ ಮಾಡಿದ್ದೇನೆ. ವೈದ್ಯಕೀಯ ಮತ್ತು ಶೈಕ್ಷಣಿಕ ಹಿನ್ನೆಲೆ ಹೊಂದಿರುವ ನಾನು ಶಿಕ್ಷಣ ರಂಗದ ಸೇವಾಕಾಂಕ್ಷಿಯಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಶಿಕ್ಷಕರ ತರಬೇತಿ ಕಾಲೇಜು ಆರಂಭಿಸುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಹಂತದಿಂದ ವೃತ್ತಿ ಶಿಕ್ಷಣ ಕಾಲೇಜುಗಳವರೆಗಿನ ವಿವಿಧ ಹಂತಗಳ ಶೈಕ್ಷಣಕ ಸಂಸ್ಥೆಗಳ, ಭಾಷಾ ಮಾಧ್ಯಮದ, ಬೋಧಕ ವೃಂದದ, ಬೋಧಕೇತರರ, ಸರಕಾರಿ ಅನುದಾನಿತ ಮತ್ತು ಅನುದಾನರಹಿತ ವಿದ್ಯಾ ಸಂಸ್ಥೆಗಳ, ಆಡಳಿತ ಮಂಡಳಿಗಳ ಬಹುಮುಖಿ ಸಮಸ್ಯೆಗಳನ್ನು ತಜ್ಞರ ಸಲಹೆ, ಮಾರ್ಗದರ್ಶ ಪಡೆದು ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖವಾಗುವ ಬದ್ಧತೆ ಖಂಡಿತವಾಗಿಯೂ ನನಗಿದೆ ಎಂದು ಡಾ.ನರೇಶ್ಚಂದ್ ಹೆಗ್ಡೆ ಭರವಸೆ ನೀಡಿದರು.
ರಾಜಕೀಯ ಕ್ಷೇತ್ರಕ್ಕೆ ಪದವೀದರರು, ಸುಶಿಕ್ಷಿತರು ಹಾಗೂ ಯುವ ಸಮೂಹ ಬರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.