ಬೆಂಗಳೂರು ಮೇ 20 NEWS DESK : ದೇಶದಲ್ಲಿ ಜುಲೈ 1ರಿಂದ ಮೂರು ಹೊಸ ಕಾನೂನುಗಳು ಅನುಷ್ಠಾನಕ್ಕೆ ಬರಲಿವೆ. ದೇಶದಲ್ಲಿ ಜಾರಿಯಲ್ಲಿದ್ದ ಐಪಿಸಿ, ಸಿಆರ್‌ಪಿಸಿ ಹಾಗೂ ಸಾಕ್ಷ್ಯ ಕಾಯ್ದೆಗಳು ಬದಲಾಗಿವೆ. ಈ ಮೂರು ಕಾಯ್ದೆಗಳ ಬದಲಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಸಂಹಿತೆ ರಚಿಸಲಾಗಿದೆ. ಈ ಮೂರು ಕಾಯ್ದೆಗಳು ಜು.1ರಿಂದ ಅನುಷ್ಠಾನಗೊಳ್ಳಲಿವೆ. ಸಾರ್ವಜನಿಕರು ಜುಲೈ 1ರಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೆ, ನೂತನ ಕಾನೂನುಗಳ ಅನ್ವಯ ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಯಾವ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂಬುದರ ಬಗ್ಗೆ ಯಾವುದೇ ಸಂಶಯವಿಲ್ಲದೆ ಸಮಗ್ರ ಮಾಹಿತಿ ತಿಳಿದುಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಫ್‌ಐಆರ್ ದಾಖಲಿಸಬೇಕು. ನ್ಯಾಯಾಲಯಗಳಲ್ಲಿ ಇಲಾಖೆಗೆ ಮುಜುಗರವಾಗದಂತೆ ಎಸಿಪಿ ಮಟ್ಟದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.












