ಮಡಿಕೇರಿ ಮೇ 19 NEWS DESK : ಕೊಡಗು ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಚುರುಕು ಪಡೆಯುತ್ತಿದ್ದು, ಜಿಲ್ಲೆಯ ಕೆಲವು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗುತ್ತಿದೆ. ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದ್ದು, ಕೊಡಗು ಜಿಲ್ಲಾಡಳಿತ ಅತಿವೃಷ್ಟಿಯನ್ನು ಎದುರಿಸಲು ಸನ್ನದ್ಧವಾಗುತ್ತಿದೆ.
::: ಸಿಬ್ಬಂದಿಗಳಿಗೆ ತರಬೇತಿ :::
ಮುನ್ನೆಚ್ಚರಿಕಾ ಕ್ರಮಗಳ ಭಾಗವಾಗಿ ಕೊಡಗು ಜಿಲ್ಲಾ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ತನ್ನ ಸಿಬ್ಬಂದಿಗಳಿಗೆ ಕೂಟುಹೊಳೆ ಹಿನ್ನೀರಿನಲ್ಲಿ ಪ್ರವಾಹ ರಕ್ಷಣಾ ಕ್ರಮಗಳ ಕುರಿತು ತರಬೇತಿ ನೀಡಿತು. ರ್ಯಾಫ್ಟ್ ಬೋಟ್ ಮೂಲಕ ಹಿನ್ನೀರಿನಲ್ಲಿ ಅಭ್ಯಾಸ ನಡೆಸಿದ ಸಿಬ್ಬಂದಿಗಳು ಪ್ರವಾಹ ಎದುರಾದ ಸಂದರ್ಭ ಸ್ಥಳಕ್ಕೆ ಧಾವಿಸುವುದು, ಹರಿಯುವ ನದಿ ನೀರಿನ ಪ್ರವಾಹಕ್ಕೆ ಎದುರಾಗಿ ಬೋಟ್ ಚಲಾಯಿಸುವುದು, ಜನ ಜಾನುವಾರುಗಳ ರಕ್ಷಣೆ ಮಾಡುವುದು, ಹಗ್ಗದ ಸಹಾಯದಿಂದ ಜನರನ್ನು ರಕ್ಷಿಸುವುದು ಸೇರಿದಂತೆ ವಿವಿಧ ರೀತಿಯ ಕಸರತ್ತನ್ನು ನಡೆಸುವ ಮೂಲಕ ತನ್ನ ಸಿಬ್ಬಂದಿಗಳಿಗೆ ಮಳೆಗಾಲ ಎದುರಾಗುವ ವಿಪತ್ತುಗಳನ್ನು ಎದುರಿಸಲು ಸಿದ್ಧಗೊಳಿಸಿದೆ.
::: ರಕ್ಷಣಾ ಉಪಕರಣ :::
ಜಿಲ್ಲಾ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಕಚೇರಿಯಲ್ಲಿ ಒಟ್ಟು 24 ಸಿಬ್ಬಂದಿಗಳಿದ್ದು, ಅಗತ್ಯ ತುರ್ತು ರಕ್ಷಣಾ ಉಪಕರಣಗಳನ್ನು ಈಗಾಗಲೇ ಸನ್ನದ್ದ ಸ್ಥಿತಿಯಲ್ಲಿಡಲಾಗಿದೆ. 2 ರ್ಯಾಫ್ಟ್ ಬೋಟ್‍ಗಳು, 1 ಬೋಟ್ ಮೋಟಾರ್, 40 ಜೀವ ರಕ್ಷಕ ಜಾಕೆಟ್‍ಗಳು, 25 ಲೈಫ್ ಬಾಯ್ ರಿಂಗ್‍ಗಳು, ಮರ ಕತ್ತರಿಸುವ ಯಂತ್ರಗಳು, ಭೂ ಕುಸಿತ ಸಂಭವಿಸಿ ರಸ್ತೆ ಬಂದ್ ಆಗುವ ಸಂದರ್ಭ ರಸ್ತೆ ಬಳಸಬೇಕಾದ ಉಪಕರಣಗಳನ್ನು ಸಿದ್ದ ಸ್ಥಿತಿಯಲ್ಲಿಡಲಾಗಿದೆ. ಅದರೊಂದಿಗೆ ಮಿನಿ ಜನರೇಟರ್, ಕಬ್ಬಿಣ ಕತ್ತರಿಸುವ ಯಂತ್ರಗಳು, ರಾತ್ರಿ ವೇಳೆಯ ಕಾರ್ಯಾಚರಣೆ ಸಂದರ್ಭ ಬಳಸುವ ಮೊಬೈಲ್ ರೆಸ್ಕ್ಯೂ ವಾಹನವನ್ನೂ ಕೂಡ ಸನ್ನದ್ದವಾಗಿಡಲಾಗಿದೆ. ಇನ್ನು ಜಿಲ್ಲಾಡಳಿತದ ಕೋರಿಕೆ ಮೇರೆಗೆ ಕೇಂದ್ರೀಯ ಮೀಸಲು ಪಡೆಯ ಎನ್‍ಡಿಆರ್‍ಎಫ್ ಯೋಧರ ತಂಡ, ರಾಜ್ಯ ಸರಕಾರದ ಎಸ್‍ಡಿಆರ್‍ಎಫ್ ತಂಡ ಕೂಡ ಜಿಲ್ಲೆಗೆ ಆಗಮಿಸಲಿದೆ.
ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಪಿ.ಕೆ.ಶೋಬಿತ್ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿ ನೀಡಿ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇಲಾಖೆ ಸಿಬ್ಬಂದಿಗಳಿಗೆ ಮೊದಲ ಹಂತದಲ್ಲಿ ಸನ್ನದ್ದತಾ ತರಬೇತಿ ನೀಡಲಾಗಿದೆ. ಪ್ರವಾಹ ಎದುರಾಗುವ ಸಾಧ್ಯತೆಗಳಿರುವ ಪ್ರದೇಶಗಳಿಗೆ ಈಗಾಗಲೇ ಭೇಟಿ ನೀಡಿ ಒಂದು ಹಂತದ ಪರಿಶೀಲನೆ ಮಾಡಲಾಗಿದ್ದು, ವರದಿಯನ್ನು ಇಲಾಖೆ ಮೇಲಾಧಿಕಾರಿಗಳಿಗೆ ನೀಡಲಾಗಿದೆ. ಮಳೆಗಾಲವನ್ನು ಎದುರಿಸಲು ಎಲ್ಲಾ ಸಿದ್ದತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
::: ಉತ್ತಮ ಮಳೆ :::
ಜಿಲ್ಲೆಯಲ್ಲಿ ದಟ್ಟ ಮೋಡ ಕವಿದ ವಾತಾವರಣವಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ ನಿತ್ಯ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮೇ 21ರವರೆಗೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆಗಳಿದೆ.