ಮಡಿಕೇರಿ ಮೇ 21 NEWS DESK : ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಉಪಸ್ಥಿತಿಯಲ್ಲಿ ಮಂಗಳವಾರ ‘ಭಯೋತ್ಪಾದನಾ ವಿರೋಧಿ’ ದಿನಾಚರಣೆ ಪ್ರಯುಕ್ತ ‘ಪ್ರತಿಜ್ಞಾ ವಿಧಿ’ ಸ್ವೀಕರಿಸುವ ಕಾರ್ಯಕ್ರಮ ನಡೆಯಿತು.
ಪ್ರತಿಜ್ಞಾ ವಿಧಿಯನ್ನು ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ ಅವರು ಬೋಧಿಸಿದರು.
ಅಹಿಂಸೆ ಹಾಗೂ ಸಹನೆಗೆ ಹೆಸರಾದ ಭಾರತ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸದಿಂದ ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲ ಶಕ್ತಿ ಸಾಮಥ್ರ್ಯದಿಂದ ಎದುರಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಿದರು.
ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವು ಸಾಧಿಸಲು ಹಾಗೂ ಉತ್ತೇಜಿಸಲು ಮತ್ತು ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆಯೊಡ್ಡುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ಎಲ್ಲರೂ ಪಣತೊಡಬೇಕು ಎಂದು ಬಸಪ್ಪ ಅವರು ಪ್ರಮಾಣ ವಚನ ಬೋಧಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾರಾಯಣ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನಾಗರಾಜು, ಸಾಮಾಜಿಕ ಭದ್ರತಾ ಯೋಜನೆಯ ಸಹಾಯಕ ನಿರ್ದೇಶಕರಾದ ಮಮತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.