ಸೋಮವಾರಪೇಟೆ ಮೇ 21 NEWS DESK : ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಕಳೆದ ಒಂದು ತಿಂಗಳಿನಿಂದ ಸಾರ್ವಜನಿಕರ ಸೇವೆಗೆ ಲಭ್ಯವಿರದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ದೀಪಕ್ ಅವರ ನೇತೃತ್ವದಲ್ಲಿ ಕಛೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ಆಡಳಿತಾಧಿಕಾರಿ ಮೀನಾಕ್ಷಿ ಅವರು ಮಾತನಾಡಿ, ನಾನು ಇತ್ತೀಚೆಗಷ್ಟೇ ಅಧಿಕಾರವಹಿಸಿಕೊಂಡಿದ್ದು, ಈ ಬಗ್ಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಎರಡು ದಿನಗಳೊಳಗೆ ಸಮಸ್ಯೆ ಸರಿಪಡಿಸುವುದಾಗ ಭರವಸೆ ನೀಡಿದರು.
ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ರೋಗಿಗಳಿಗೆ ಸಮಸ್ಯೆಯಾಗಿದೆ. ಆಸ್ಪತ್ರೆಯ ಖಾಲಿ ಹುದ್ದೆಗಳು ಭರ್ತಿ ಆಗಿಲ್ಲ. ಗ್ರಾಮೀಣ ಭಾಗದ ಬಡ ರೋಗಿಗಳು ಈ ಆಸ್ಪತ್ರೆಯನ್ನೇ ಅವಲಂಭಿಸಿದ್ದಾರೆ. ತಜ್ಞ ವೈದ್ಯರಿಲ್ಲದೆ ಪ್ರಾಥಮಿಕ ಚಿಕಿತ್ಸೆ ಮಾತ್ರ ದೊರೆಯುತ್ತಿದೆ. ರೋಗಿ ನಗರ ಪ್ರದೇಶಗಳಿಗೆ ತೆರಳಬೇಕಾಗಿದೆ ಎಂದು ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸೇರಿದಂತೆ ಆಸ್ಪತ್ರೆಗೆ ಬೇಕಾಗಿರುವ ಅಗತ್ಯ ಸೌಲಭ್ಯಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ವೈದ್ಯಾಧಿಕಾರಿ ಕಿರಣ್ ತಿಳಿಸಿದರು. ಕರವೇ ನಗರಾಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ನಗರ ಕಾರ್ಯದರ್ಶಿ ರವೀಶ್, ತಾಲ್ಲೂಕು ಉಪಾಧ್ಯಕ್ಷ ಶಿವು, ಜಿಲ್ಲಾ ಕಾರ್ಮಿಕ ಘಟಕದ ಸಂಚಾಲಕ ಮಂಜುನಾಥ್, ಯುವ ಘಟಕದ ಸಂಚಾಲಕರಾದ ನಿತನ್ ಮಿಟ್ಟು, ಬಿ.ವಿ.ರವಿ, ಪುರುಷೋತ್ತಮ, ಇಬ್ರಾಹಿಂ ಇದ್ದರು.