ಸುಂಟಿಕೊಪ್ಪ ಮೇ 21 NEWS DESK : ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ವ್ಯಾಪ್ತಿಯ ಕುಂಬೂರಿನಲ್ಲಿ ನಿರ್ಮಿಸಲಾಗಿರುವ ಪವಿತ್ರ ಕುಟುಂಬ ದೇವಾಲಯವನ್ನು ಮಂಗಳವಾರದಂದು ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಪರಮಪೂಜ್ಯ ಡಾ. ಬರ್ನಾಡ್ ಮೊರಾಸ್ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ನೂತನ ಬಲಿಪೀಠದಲ್ಲಿ ಪರಮಪೂಜ್ಯ ಡಾ.ಬರ್ನಾಡ್ ಮೊರಾಸ್ ಹಾಗೂ ಸಹಗುರುಗಳು ಬಲಿಆರ್ಪಣೆಯನ್ನು ಸಲ್ಲಿಸಿದರು. ಕುಂಬೂರುವಿನ ಪವಿತ್ರ ಕುಟುಂಬ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇಂದು ಕಾಣುತ್ತಿರುವ ಭವ್ಯ ದಿವ್ಯ ನವೀನ ದೇವಾಲಯಕ್ಕೆ 10 ಹಲವು ಧರ್ಮಗುರುಗಳು ಮತ್ತು ಭಕ್ತರ ತ್ಯಾಗ ಪರಿಶ್ರಮ, ಭಕ್ತಿಯ ಸಮರ್ಪಣೆಯಾಗಿದೆ ಎಂದು ಶ್ಲಾಘಿಸಿದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದಾಗಿದ್ದು, ವಿವಿಧ ಧಾರ್ಮಿಕ ನಂಬಿಕೆಗಳು ಆಚಾರ ವಿಚಾರಗಳು ವೇಷಭೂಷಣಗಳು ಬೇರೆ ಬೇರೆಯಾಗಿದ್ದರೂ ಕೂಡ ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಹೇಳಿದರು.
ಧರ್ಮಕೇಂದ್ರದ ಧರ್ಮಗುರುಗಳಾದ ರೇ.ಫಾ.ರಾಜೇಶ್ ಮಾತನಾಡಿ ಹುಲ್ಲುಹಾಸಿನ ಕಟ್ಟಡದಿಂದ ಪವಿತ್ರ ಕುಟುಂಬ ದೇವಾಲಯದ ಪರಿಶ್ರಮವನ್ನು ವಿವರಿಸಿದರು. ಜೀರ್ಣೋದ್ಧಾರಕ್ಕೆ ವಂ. ಫಾ. ಸಂತೋಷ್ ಅವರು ಶಿಲಾನ್ಯಾಸ ಮಾಡಿದ್ದು ಅದನ್ನು ಮುಂದುವರಿಸುವ ಜವಾಬ್ಧಾರಿ ನನಗೆ ಬಂದಾಗ ಒಂದು ಹಂತದಲ್ಲಿ ಇತಿಹಾಸವನ್ನು ಓದಿದಾಗ ದೇವಾಲಯ ನಿರ್ಮಾಣ ಕಾರ್ಯ ಅಸಾಧ್ಯವೆಂದು ಅನ್ನಿಸಿತು. ಆದರೆ ದೇವಾಲಯದ ಭಕ್ತರ ಒತ್ತಾಸೆ ಮತ್ತು ಸಹಕಾರದಿಂದ ದೇವಾಲಯದ ನಿರ್ಮಾಣದ ಕನಸು ನನಸಾಯಿತು ಎಂದರು.
ಈ ಸಂಧರ್ಭ ಮೈಸೂರು ಧರ್ಮ ಕ್ಷೇತ್ರದ ರೇ.ಫಾ.ಜಾನ್ ಅಲ್ಬರ್ಟ್ ಮೆಂಡೋನ್ಸಾ, ಹಟ್ಟಿಹೊಳೆ ಧರ್ಮಕೇಂದ್ರದ ಧರ್ಮ ಗುರುಗಳಾದ ಗಿಲ್ಬರ್ಟ್ ಡಿಸಿಲ್ವ, ಜಿಲ್ಲೆ ಸೇರಿದಂತೆ ವಿವಿಧ ದರ್ಮಕೇಂದ್ರಗಳಿಂದ ಆಗಮಿಸಿದ ಧರ್ಮಗುರುಗಳು, ಲಕ್ಷ್ಮೀಜಾಲ ತೋಟದ ಮಾಲೀಕರಾದ ಕೊಂಗಡ ವಿನಯ್ ಸೋಮಯ್ಯ, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಪ್ಪ, ಉಪಾಧ್ಯಕ್ಷ ಸುರೇಶ್, ಸದಸ್ಯರಾದ ಅಂತೋಣಿ, ದಮಯಂತಿ ಮತ್ತಿತರರು ಇದ್ದರು. ಇದೇ ಸಂಧರ್ಭದಲ್ಲಿ ಅತಿಥಿ ಗಣ್ಯರು ಸೇರಿದಂತೆ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ದಾನಿಗಳು ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು. ಕುಂಬೂರು, ಮಾದಾಪುರ, ಹಟ್ಟಿಹೊಳೆ, ಸೋಮವಾರಪೇಟೆ, ಸುಂಟಿಕೊಪ್ಪ ಸೇರಿದಂತೆ ವಿವಿಧ ಭಾಗಗಳ ನೂರಾರು ಭಕ್ತರು ಬಲಿಆರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.