ಮಡಿಕೇರಿ ಮೇ 22 NEWS DESK : ಕಳೆದ ಎರಡು ವಾರಗಳಿಂದ ಕೊಡಗು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಬರದ ಛಾಯೆ ಮರೆಯಾಗಿದೆ. ಅತಿಯಾದ ಉಷ್ಣಾಂಶದಿಂದ ಬತ್ತಿ ಹೋಗಿದ್ದ ನದಿತೊರೆಗಳು ಜೀವಕಳೆ ಪಡೆದುಕೊಂಡಿವೆ.
ಹನಿ ನೀರಿಲ್ಲದೆ ಮರಳು, ಬಂಡೆಗಳು ಕಾಣುತ್ತಿದ್ದ ನದಿಗಳಲ್ಲಿ ಮಳೆ ನೀರು ಹರಿಯತೊಡಗಿದೆ. ಕೊಡಗು ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಕಳೆದ ಕೆಲವು ದಿನಗಳಿಂದ ಚುರುಕಾಗುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಕೊಂಚ ಬಗೆ ಹರಿಯುವ ಲಕ್ಷಣ ಕಂಡು ಬಂದಿದೆ.
ಭಾಗಮಂಡಲ, ಕಕ್ಕಬ್ಬೆ, ನಾಪೋಕ್ಲು, ಮೂರ್ನಾಡು, ವಿರಾಜಪೇಟೆ, ಕದನೂರು, ನಂಜರಾಯಪಟ್ಟಣ, ಗುಡ್ಡೆಹೊಸೂರು, ಕುಶಾಲನಗರ, ಕಣಿವೆ, ಕೂಡಿಗೆ ಸೇರಿದಂತೆ ಕಾವೇರಿ ನದಿ ಹರಿಯುವ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿದೆ. ಇದರಿಂದ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಬಳಿಯ ತೂಗು ಸೇತುವೆಯ ಬಳಿ ಕಾವೇರಿ ನದಿ ನೀರಿನಲ್ಲಿ 5 ಅಡಿಗಳಷ್ಟು ಏರಿಕೆ ಕಂಡು ಬಂದಿದೆ. ಸಂಪೂರ್ಣವಾಗಿ ಬತ್ತಿ ಹೋಗಿ ಆತಂಕ ಮೂಡಿಸಿದ್ದ ಕಾವೇರಿ ನದಿಯಲ್ಲಿ ಈಗ ಮಳೆನೀರು ಜೀವಕಳೆಯೊಂದಿಗೆ ಹರಿಯುತ್ತಿದ್ದು, ಕೃಷಿಕ ವರ್ಗದಲ್ಲಿ ಹರ್ಷ ಮೂಡಿದೆ. ಜಲಚರಗಳು ಕೂಡ ಜೀವ ಉಳಿಸಿಕೊಂಡಿವೆ.
ಪ್ರವಾಸೋದ್ಯಮವನ್ನೇ ನಂಬಿರುವವರಿಗೆ ನೀರಿನ ಕೊರತೆ ಭೀತಿ ಮೂಡಿಸಿತ್ತಾದರೂ ಇದೀಗ ಸುರಿಯುತ್ತಿರುವ ಮಳೆ ಉಪಕಾರಿಯಾಗಿದೆ. ಪ್ರವಾಸಿಗರು ಕೂಡ ಹಿಂದೆಂದೂ ಕೊಡಗಿನಲ್ಲಿ ಕಾಣದ ಬಿಸಿಲಿನಿಂದ ಬೇಸತ್ತು ಮರಳುತ್ತಿದ್ದರು. ಬತ್ತಿ ಹೋಗಿದ್ದ ನದಿ ಮತ್ತು ಜಲಪಾತಗಳನ್ನು ಕಂಡು ನಿರಾಶೆಯಿಂದ ಮರಳುತ್ತಿದ್ದರು. ಆದರೆ ಇದೀಗ ಉತ್ತಮ ಮಳೆಯಿಂದಾಗಿ ಕೊಡಗು ಮತ್ತೆ ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಕಾಡ್ಗಿಚ್ಚಿನಿಂದ ಒಣಗಿ ಹೋಗಿದ್ದ ಮರಗಿಡಗಳು ಈಗ ಚಿಗುರೊಡೆದು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ವನ್ಯಜೀವಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಮಡಿಕೇರಿ ವ್ಯಾಪ್ತಿಯ ಹೆಸರುವಾಸಿ ಪ್ರವಾಸಿತಾಣಗಳಾದ ರಾಜಾಸೀಟ್, ಮಾಂದಲಪಟ್ಟಿ, ಕೋಟೆಬೆಟ್ಟ, ಅಬ್ಬಿಫಾಲ್ಸ್ ನ ಸೊಬಗು ಹೆಚ್ಚಾಗಿದೆ. ಮೋಡ, ಮಂಜು, ಮಳೆಹನಿ, ತಂಪಿನ ವಾತಾವರಣ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
::: ಮುಂಗಾರಿನ ನಿರೀಕ್ಷೆ :::
ಮೇ 29 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂನ್ 1ರಂದು ನೈರುತ್ಯ ಮುಂಗಾರು ಮಾರುತ ಕೇರಳ ಪ್ರವೇಶಿಸಲಿದೆ, ಇದರೊಂದಿಗೆ ಗಡಿ ಜಿಲ್ಲೆ ಕೊಡಗಿನಲ್ಲೂ ಮಳೆಗಾಲ ಆರಂಭವಾಗಲಿದೆ. ಕಳೆದ ಎರಡು ವಾರಗಳ ಮಳೆ ರೈತಾಪಿ ವರ್ಗದಲ್ಲಿ ಹೊಸ ಭರವಸೆ ಮೂಡಿಸಿದೆ. ಮುಂಗಾರು ಕೂಡ ಜೋರು ಇರಲಿದೆ ಎನ್ನುವ ನಿರೀಕ್ಷೆ ಇದೆ.
::: ಮಳೆ ವಿವರ :::
ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 32.24 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.67 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 230.48 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 123.56 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 28.80 ಮಿ.ಮೀ. ಕಳೆದ ವರ್ಷ ಇದೇ ದಿನ 0.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 325.59 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 179.73 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 16.50 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.10 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 139.35 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 75.21 ಮಿ.ಮೀ. ಮಳೆಯಾಗಿತ್ತು.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 30.10 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.84 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 206.99 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 78.78 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 37.70 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 210.35 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 96.66 ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 48.10 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 270.10 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 187.40 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 23.60, ನಾಪೋಕ್ಲು 28, ಸಂಪಾಜೆ 37, ಭಾಗಮಂಡಲ 26.60, ವಿರಾಜಪೇಟೆ ಕಸಬಾ 12, ಅಮ್ಮತ್ತಿ 21, ಹುದಿಕೇರಿ 13.90, ಶ್ರೀಮಂಗಲ 6.40, ಪೊನ್ನಂಪೇಟೆ 20, ಬಾಳೆಲೆ 80.08, ಸೋಮವಾರಪೇಟೆ ಕಸಬಾ 18.60, ಶನಿವಾರಸಂತೆ 46, ಶಾಂತಳ್ಳಿ 50, ಕೊಡ್ಲಿಪೇಟೆ 36.20, ಕುಶಾಲನಗರ 61, ಸುಂಟಿಕೊಪ್ಪ 35.20 ಮಿ.ಮೀ.ಮಳೆಯಾಗಿದೆ.
::: ಹಾರಂಗಿ ನೀರಿನ ಮಟ್ಟ :::
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2823.21 ಅಡಿಗಳು. ಕಳೆದ ವರ್ಷ ಇದೇ ದಿನ 2819.75 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 31.40 ಮಿ.ಮೀ., ಇಂದಿನ ನೀರಿನ ಒಳಹರಿವು 356 ಕ್ಯುಸೆಕ್, ಕಳೆದ ವರ್ಷ ಇದೇ ದಿನ 68 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*