ವಿರಾಜಪೇಟೆ ಮೇ 23 NEWS DESK : ಕೊಡಗು ಹಾಕಿ ಕ್ರೀಡಾ ಪ್ರೇಮಿಗಳ ತವರೂರು. ಇಲ್ಲಿನ ಜನರು ಕ್ರೀಡೆಗೆ ತೋರಿಸುತ್ತಿರುವ ಪ್ರೀತಿಯೇ ಇದಕ್ಕೆ ಕಾರಣ ಎಂದು ಒಡಿಸ್ಸಾದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹಾಕಿ ಕೋಚ್ ಬಿ.ಜೆ.ಕಾರ್ಯಪ್ಪ ಅಭಿಪ್ರಾಯಪಟ್ಟರು.
ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಬಿಬಿಎ ವಿಭಾಗದ ಸಹಯೋಗದಲ್ಲಿ ಪೊನ್ನಂಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಅನೇಕ ಅವಕಾಶಗಳಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆಯುವಂತಾಗಬೇಕು ಎಂದು ಕಿವಿ ಮಾತು ಹೇಳಿದರು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಸೆಂಟ್ ಆನ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ರೆ.ಫಾ.ಮದಲೈ ಮುತ್ತು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದರು. ವಿವಿಧ ಕಾಲೇಜುಗಳ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದು ಪಂದ್ಯಾಟದಲ್ಲಿ ಗೆಲುವನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಐಸಾಕ್ ರತ್ನಾಕರ್ ಮಾತನಾಡಿ, ಹಾಕಿ ಪಂದ್ಯಾಟವು ಕೊಡಗಿನ ಎಲ್ಲೆಡೆಗಳಲ್ಲಿ ಪ್ರತೀ ವರ್ಷವೂ ಆಯೋಜಿಸಲಾಗುತ್ತಿದೆ. ಕೊಡಗು ಹಾಕಿಗೆ ಹೆಸರುವಾಸಿಯಾಗಿದೆ ಎಂದರು. ಮಾತ್ರವಲ್ಲದೆ ಈ ರಾಜ್ಯ ಮಟ್ಟದ ಹಾಕಿ ಪಂದ್ಯಾಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕ್ರೀಡಾ ಸ್ಫೂರ್ತಿ ಯನ್ನು ತೋರಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸಹಾಯಕ ಧರ್ಮ ಗುರು ಫಾ. ಚಾರ್ಲ್ಸ್, ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ.ರಾಜ ರೈ, ವಿದ್ಯಾರ್ಥಿ ನಾಯಕ ತನಿಷ್, ಉಪನ್ಯಾಸಕರು, ವಿದ್ಯಾರ್ಥಿಗಳು, ಹಾಕಿ ರೆಫ್ರಿಗಳು, ಆಟಗಾರರು ಹಾಜರಿದ್ದರು.
ಪಂದ್ಯಾಟದ ಆಯೋಜಕಿ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ಬಿ.ಡಿ.ಹೇಮ ಸ್ವಾಗತಿಸಿದರು. ಉಪನ್ಯಾಸಕಿ ಶಿಲ್ಪಾ ವಂದಿಸಿದರು. ಎರಡು ದಿವಸಗಳ ಕಾಲ ನಡೆಯುವ ಈ ಪಂದ್ಯಾಟದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಯ 16 ತಂಡಗಳು ಭಾಗವಹಿಸಿವೆ.