ಮಡಿಕೇರಿ ಜೂ.1 NEWS DESK : ಮಂಗಳೂರಿನ ಕಂಕನಾಡಿ ಬಳಿ ಅನುಮತಿ ಇಲ್ಲದೆ ರಸ್ತೆಯಲ್ಲಿ ನಮಾಝ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಕಲಾಗಿರುವ “ಬಿ” ರಿಪೋರ್ಟ್ ನ್ನು ರದ್ದುಗೊಳಿಸಬೇಕು, ಈ ಪ್ರಕರಣದಲ್ಲಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಯ ಮೇಲಿನ ಅಮಾನತು ಆದೇಶವನ್ನು ಕೈಬಿಡಬೇಕು ಮತ್ತು ಹಿಂದೂ ಮುಖಂಡ ಶರಣ್ ಪಂಪುವೆಲ್ ಅವರನ್ನು ಗುರಿಯಾಗಿಸಿಕೊಂಡು ದಾಖಲಿಸಿರುವ ಪ್ರಕರಣವನ್ನು ವಾಪಾಸ್ಸು ಪಡೆಯಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪ್ರಮುಖರು ಜಿಲ್ಲಾಧಿಕಾರಿಗಳ ಮೂಲಕ ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಘಟನೆಗಳ ಪ್ರಮುಖರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳೂರು ಕಂಕನಾಡಿ ಬಳಿ ರಸ್ತೆಯಲ್ಲಿ ಕೆಲವರು ಅನುಮತಿ ಇಲ್ಲದೆ ನಮಾಝ್ ಮಾಡಿದ್ದರು. ಪೊಲೀಸರು ಇದನ್ನು ಗಮನಿಸಿ ಸುಮೋಟೊ ಪ್ರಕರಣ ದಾಖಲಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಹಾಗೂ ಮುಸ್ಲಿಂ ಸಂಘಟನೆಯ ಒತ್ತಡದ ಮೇರೆಗೆ ಆ ಪ್ರಕರಣವನ್ನು ‘ಬಿ’ ರಿಪೋರ್ಟ್ ಹಾಕಿ ಹಿಂಪಡೆಯಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವ ಸ್ಥಳೀಯ ಪೊಲೀಸರು ನ್ಯಾಯಯುತವಾಗಿ ಪ್ರಕರಣ ದಾಖಲಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದರು.
ಈಗಾಗಲೇ ದಾಖಲಿಸಲಾಗಿರುವ “ಬಿ” ರಿಪೋರ್ಟ್ ನ್ನು ರದ್ದುಪಡಿಸಿ, ಪ್ರಕರಣವನ್ನು ಮುಂದುವರಿಸಬೇಕು, ಅನುಮತಿ ಇಲ್ಲದೆ ರಸ್ತೆಯಲ್ಲಿ ನಮಾಝ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಇನ್ನು ಮುಂದೆ ಎಲ್ಲೂ ರಸ್ತೆಯಲ್ಲಿ ನಮಾಝ್ ಮಾಡದಂತೆ ಕ್ರಮ ಕೈಗೊಳ್ಳಬೇಕು ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಯ ಅಮಾನತು ಆದೇಶವನ್ನು ತಕ್ಷಣ ರದ್ದುಗೊಳಸಬೇಕು ಎಂದು ಪ್ರಮುಖರು ಒತ್ತಾಯಿಸಿದರು.
::: ಜೈ ಶ್ರೀರಾಮ್ ಗೆ “ಬಿ” ರಿಪೋರ್ಟ್ ಇಲ್ಲ :::
ಮಂಗಳೂರಿನ ಜ್ಞರೋಸಾ ಶಾಲೆಯ ಎದುರು ಅನುಮತಿ ಇಲ್ಲದೆ ಜೈ ಶ್ರೀರಾಮ್ ಹೇಳಿದ್ದಕ್ಕೆ ಕೆಲವು ತಿಂಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಆದರೆ ಇಲ್ಲಿಯವರೆಗೆ “ಬಿ” ರಿಪೋರ್ಟ್ ಹಾಕಿಲ್ಲ.
ಜ್ಜೆರೋಸಾ ಪ್ರಕರಣದಲ್ಲಿ ಹಿಂದೂ ಮುಖಂಡ ಶರಣ್ ಪಂಪುವೆಲ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಎಳೆದು ತರಲಾಗಿದೆ. ಇವರು ಸ್ಥಳದಲ್ಲಿ ಇಲ್ಲದಿದ್ದರೂ, ಗುರಿಯಾಗಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಮುಖರು, ಶರಣ್ ಪಂಪುವೆಲ್ ಅವರ ಮೇಲಿನ ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕೋಮು ದ್ವೇಷವನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಮಂಡ್ಯ ಮತ್ತು ಚನ್ನಗಿರಿಯಲ್ಲಿ ಕೋಮುವಾದಿಗಳು ಕೈಯಲ್ಲಿ ಆಯುಧಗಳನ್ನು ಹಿಡಿದು ಅಮಾಯಕ ನಾಗರೀಕರನ್ನು ಭಯಭೀತಗೊಳಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನು ನಿಯಂತ್ರಿಸಬೇಕಾದ ರಾಜ್ಯ ಸರಕಾರ ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನು ನಿಷ್ಕ್ರಿಯಗೊಳಿಸುತ್ತಿದೆ. ಕಾನೂನು ಉಲ್ಲಂಘಿಸುವವರ ಪರ ನಿಂತಿರುವ ಸರಕಾರ ತಾರತಮ್ಯ ಮತ್ತು ದ್ವೇಷದ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರಕಾರ ಹಿಂದೂಗಳ ವಿರುದ್ಧ ತಾರತಮ್ಯ ಮತ್ತು ದಮನ ನೀತಿ ಅನುಸರಿಸುವುದನ್ನು ತಕ್ಷಣ ನಿಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಮನವಿ ಮಾಡಲಾಗಿದೆ.
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಸಂದರ್ಭ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಕೋಶಾಧ್ಯಕ್ಷ ಸಂಪತ್ ಕುಮಾರ್, ಉಪಾಧ್ಯಕ್ಷ ಡಿ.ನರಸಿಂಹ, ಬಜರಂಗದಳದ ಜಿಲ್ಲಾ ಸಂಯೋಜಕ ಪ್ರವೀಣ್ ಸಿದ್ದಾಪುರ, ಸಹ ಸಂಯೋಜಕ ನವೀನ್ ಪೂಜಾರಿ, ಪ್ರಚಾರ ಪ್ರಸಾರ ಪ್ರಮುಖ್ ಶಾನ್ ಸೋಮಣ್ಣ ಹಾಗೂ ವಿರಾಜಪೇಟೆ ತಾಲ್ಲೂಕು ಅಖಾಡ ಪ್ರಮುಖ್ ಟಿ.ಕೆ.ರದೀಶ್ ಉಪಸ್ಥಿತರಿದ್ದರು.