ಮಡಿಕೇರಿ ಜೂ.2 NEWS DESK : ಸಂವಿಧಾನದ ಆಶಯ ಈಡೇರಬೇಕಾದರೆ ಪತ್ರಕರ್ತರು ಅನಿವಾರ್ಯವಾಗಿದ್ದಾರೆ. ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಸಂಬಂಧಪಟ್ಟವರಿಗೆ ತಿಳಿಸುವ ಮೂಲಕ ಸಮಸ್ಯೆಗಳಿದ್ದರೆ ಪರಿಹರಿಸುವುದು, ತಪ್ಪುಗಳಿದ್ದರೆ ತಿದ್ದಿಕೊಳ್ಳುವಂತೆ ಮಾಡಿ ಸದೃಢ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ತಿಳಿಸಿದ್ದಾರೆ. ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಬೆಳ್ಳಿ ಮಹೋತ್ಸವದ ಸ್ಮರಣ ಸಂಚಿಕೆ “ಪಿಂಜರಿ” ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪತ್ರಕರ್ತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರ ನಡುವೆ ತನಗೆ ಒಡನಾಟ ಇರುವ ಕಾರಣ ನೋವು- ನಲಿವಿನ ಪೂರ್ಣ ಅರಿವಿದೆ. ಪತ್ರಕರ್ತರು ಸಂಘಟಿತರಾಗಿ ಸರಕಾರದ ಮಟ್ಟದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಸಮಸ್ಯೆ ಪರಿಹಾರಕ್ಕೆ ಎಂದಿಗೂ ಜೊತೆಗಿರುವೆ ಎಂದು ಅಭಯ ನೀಡಿದರು.
ರಜತ ಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಪತ್ರಕರ್ತರು ಸಂಭ್ರಮಿಸುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿರುವುದು ಗಮನಾರ್ಹವಾಗಿದೆ. ಪ್ರೆಸ್ ಕ್ಲಬ್ 25 ವರ್ಷಗಳ ಕಾಲ ನಡೆದು ಬಂದ ಹಾದಿಯನ್ನು ಯಾರೂ ಮರೆಯಬಾರದು. ಸ್ಮರಣ ಸಂಚಿಕೆಗಳಿಂದ ಮಾಡಿದ ಕೆಲಸ ದಾಖಲೆಯಾಗಿ ಉಳಿದುಕೊಂಡು ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ. ಕ್ಲಬ್ ಈ ಮಟ್ಟಕ್ಕೆ ಬೆಳೆಯಲು ಹಲವರ ಕೊಡುಗೆ ಇದೆ. ಸಂಘಟನೆ ಮತ್ತಷ್ಟು ಬಲವಾಗಿ ಬೆಳೆಯಲಿ ಎಂದು ಪೊನ್ನಣ್ಣ ಆಶಿಸಿದರು.
ಉದ್ಯಮಿ ನಾಪಂಡ ಮುದ್ದಪ್ಪ ಮಾತನಾಡಿ, ಸಾಂಪ್ರದಾಯಿಕ ಮಾಧ್ಯಮಗಳು ಸಂದಿಗ್ಧತೆಯಲ್ಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಶೀಘ್ರ ಸುದ್ದಿ ಹರಡುತ್ತಿದ್ದರೂ, ಅದರ ನೈಜಾಂಶ ಪತ್ರಿಕೆಯ ಮೂಲಕವೇ ಜನರಿಗೆ ತಿಳಿಯುವ ಅನಿವಾರ್ಯತೆ ಇದೆ.
ಪ್ರಜಾಪ್ರಭುತ್ವವನ್ಮು ಆರೋಗ್ಯಯುತವಾಗಿ ಮುನ್ನಡೆಸುವ ಜವಾಬ್ದಾರಿ ಪತ್ರಕರ್ತರ ಮೇಲಿದ್ದು, ಧರ್ಮ, ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವ ಕೆಲಸಗಳು ಕೆಲ ಪತ್ರಕರ್ತರಿಂದ ನಡೆಯುತ್ತಿರುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಆಚರಣಾ ಸಮಿತಿ ಮಹಾಪೋಷಕರಾದ ಜಿ. ರಾಜೇಂದ್ರ ಮಾತನಾಡಿ, ಎಲ್ಲಾ ಕ್ಷೇತ್ರದವರನ್ನು ಭಾಗಿಗೊಳಿಸಿಕೊಂಡು, ಕೇವಲ ಪ್ರಚಾರಕ್ಕಲ್ಲದೆ, ಪ್ರಯೋಜನಕ್ಕಾಗಿ ಕ್ಲಬ್ ರಜತ ಮಹೋತ್ಸವವನ್ನು ಅರ್ಥಪೂರ್ಣ ಹಾಗೂ
ಪ್ರಯೋಜನಕಾರಿಯಾಗಿ ಆಚರಿಸಿದೆ. ಸ್ಮರಣ ಸಂಚಿಕೆ ಸಂಘಟನೆ ಕಾರ್ಯಚಟುವಟಿಕೆಯ ದಾಖಲೆಯಾಗಿ ಉಳಿಯಲಿದೆ. ಪ್ರೆಸ್ ಕ್ಲಬ್ ಮೂಲಕ ಸಹಕಾರಿ ಸಂಘ ಸ್ಥಾಪನೆ ಮಾಡುತ್ತಿರುವುದು ಪ್ರಶಂಸನೀಯ. ಇದರಲ್ಲಿ ಯಾವುದೇ ಕುಂದು-ಕೊರತೆ ಬಾರದಂತೆ ನಿಗಾವಹಿಸಿ ಆರ್ಥಿಕ ಶಿಸ್ತು ಕಾಯ್ದುಕೊಂಡು ಸದಸ್ಯರಿಗೆ ಸಹಕಾರಿಯಾಗುವಂತೆ ಮುನ್ನಡೆಯಲಿ ಎಂದು ಆಶಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ನೇತೃತ್ವದಲ್ಲಿ ಬೆಳ್ಳಿಮಹೋತ್ಸವ ಅಂಗವಾಗಿ ಮಾಡಿದ ಕಾರ್ಯಕ್ರಮಗಳು ಇತರೆ ಸಂಘಟನೆಗಳಿಗೆ ಮಾದರಿಯಾಗಿವೆ. ವೃತ್ತಿ ಒತ್ತಡದಲ್ಲಿರುವ ಪತ್ರಕರ್ತರ ಮನೋಲ್ಲಾಸಕ್ಕೆ ಹತ್ತುಹಲವು ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ. ಹಲವು ಹಿರಿಯರು ಶ್ರಮಿಸಿದ ಫಲವಾಗಿ ಇಂದು ಸಂಘಟನೆ ಭದ್ರವಾಗಿ ನೆಲೆಯೂರಿದೆ. ಪತ್ರಕರ್ತರು ಧಾವಂತವಾಗಿ ಸುದ್ದಿ ನೀಡುವ ಮುನ್ನ ಅದರ ಸತ್ಯಾಸತ್ಯತೆ ಅರಿತುಕೊಳ್ಳುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ಹಲವಷ್ಟು ಕಾರ್ಯಕ್ರಮಗಳನ್ನು ಮಾಡಿ ರಜತ ಸಂಭ್ರಮವನ್ನು ಆಚರಿಸಿದ್ದೇವೆ. ಸದಸ್ಯರ ಹಿತಾಸಕ್ತಿ ಕಾಪಾಡುವ, ಸಾರ್ವಜನಿಕರನ್ನು ಒಳಗೊಂಡ ಹಲವು ಕಾರ್ಯಕ್ರಮ ಮಾಡಲಾಗಿದೆ ಕಾರ್ಯಕ್ರಮ ಜೀವಂತವಾಗಿಡಲು ಸ್ಮರಣ ಸಂಚಿಕೆಯನ್ನು ಹೊರತರಲಾಗಿದ್ದು, ಕೊಡಗಿನ ವಿವಿಧ ವಿಚಾರಗಳ ಬಗ್ಗೆಗಿನ ಲೇಖನಗಳನ್ನು ಸಂಚಿಕೆ ಒಳಗೊಂಡಿದೆ ಎಂದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ಷವಿಡಿ ವೈವಿಧ್ಯಮಯ, ಸಮಾಜಮುಖಿ ಹಾಗೂ ಜನಸ್ನೇಹಿ ಕಾರ್ಯಕ್ರಮವನ್ನು ಆಚರಿಸಿ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣಗೊಳಿಸಲಾಗಿದೆ. ಸಂಘಟನೆಯ ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕೊಡಗು ಜಿಲ್ಲೆಯ ಪತ್ರಕರ್ತರಲ್ಲಿ ಪ್ರಾಮಾಣಿಕತೆ, ಬದ್ಧತೆ ಇದೆ ಎಂದು ಶ್ಲಾಘಿಸಿದರು. ರೇಖಾ ಗಣೇಶ್ ಪ್ರಾರ್ಥಿಸಿ, ಸಂಘಟನಾ ಕಾರ್ಯದರ್ಶಿ ಎಂ.ಎನ್.ಚಂದ್ರಮೋಹನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್
ನಿರೂಪಿಸಿ, ನವೀನ್ ಡಿಸೋಜ ವಂದಿಸಿದರು.
ವಾರ್ಷಿಕ ಪ್ರಶಸ್ತಿ ಪ್ರದಾನ : ಹಿರಿಯ ಪತ್ರಕರ್ತ ಮಹಂತೇಶ್ ಜ್ಞಾಪಕರ್ಥ ಕೊಡಮಾಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಯನ್ನು ಶಕ್ತಿ ದಿನಪತ್ರಿಕೆಯ ಸಿದ್ದಾಪುರದ ವರದಿಗಾರ ಎ.ಎನ್. ವಾಸು, ಎಂ.ಎನ್. ಚಂದ್ರಮೋಹನ್ ತಮ್ಮ ತಂದೆ ಎಂ.ನಾರಾಯಣ, ತಾಯಿ ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ವರದಿ ಪ್ರಶಸ್ತಿಯನ್ನು ಟಿವಿ9 ವಾಹಿನಿ ಜಿಲ್ಲಾ ವರದಿಗಾರ ಐಮಂಡ ಗೋಪಾಲ್ ಸೋಮಯ್ಯ, ಹಿರಿಯ ಪತ್ರಕರ್ತ ಕೋವರ್ ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಬಿ.ವಿ. ಚಂದ್ರಶೇಖರ್, ತಾಯಿ ಪುಷ್ಪಲತಾ ಹೆಸರಿನಲ್ಲಿ ಸ್ಥಾಪಿಸಿರುವ ಮಾನವೀಯ ವರದಿ ಪ್ರಶಸ್ತಿಯನ್ನು ಸ್ಟಾರ್ ಆಫ್ ಮೈಸೂರು ಪತ್ರಿಕೆ ವರದಿಗಾರ ಆಕ್ಷಯ್ ಅವರುಗಳಿಗೆ ಪ್ರದಾನ ಮಾಡಲಾಯಿತು.
ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿಗೆ ಭಾಜನರಾದ ಜಗದೀಶ್ ಜೋಡುಬೀಟಿ, ಸಣ್ಣುವಂಡ ಕಿಶೋರ್ ನಾಚಪ್ಪ, ಪಿ.ಬಿ. ಅಕ್ಷಯ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಪ್ರಶಸ್ತೆಗೆ ಬಾಜನರಾದ ಇಸ್ಮಾಯಿಲ್ ಕಂಡಕರೆ ಅವರನ್ನು ಸನ್ಮಾನಿಸಲಾಯಿತು.
:: ಮಹಾಸಭೆ ::
ಕಾರ್ಯಕ್ರಮಕ್ಕೂ ಮುನ್ನ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು. ಖಜಾಂಜಿ ಬೊಳ್ಳಜಿರ ಅಯ್ಯಪ್ಪ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷರುಗಳಾದ ಸುಬ್ರಮಣಿ, ಸಿ.ಪಿ. ತೇಜಸ್, ಸಂಘಟನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್ ಹಾಜರಿದ್ದರು.
Breaking News
- *ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ*
- *ಕೊಡಗು ಹಿತರಕ್ಷಣಾ ವೇದಿಕೆಯಿಂದ ಸಂಭ್ರಮದ 76ನೇ ಗಣರಾಜ್ಯೋತ್ಸವ ಆಚರಣೆ*
- *ರಾಜಾಸೀಟು ಸೊಬಗಿಗೆ ಮನಸೋತ ಉಸ್ತುವಾರಿ ಸಚಿವರು*
- *ಸಿಕ್ಕ ಸಿಕ್ಕ ವಾಹನಗಳ ಮೇಲೆ ಒಂಟಿ ಸಲಗ ದಾಳಿ*
- *ಕೊಡ್ಲಿಪೇಟೆ ನಂದಿಪುರ ಕೆರೆ ಅಭಿವೃದ್ಧಿ : ಗ್ಯಾರಂಟಿ ಯೋಜನೆಗಳ ಮೂಲಕ ಭ್ರಷ್ಟಚಾರವಿಲ್ಲದೆ ಜನರಿಗೆ ನೇರವಾಗಿ ಹಣ : ಸಚಿವ ಎನ್.ಎಸ್.ಭೋಸರಾಜು*
- *ಸಿಎನ್ಸಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಹಕ್ಕೊತ್ತಾಯ ಮಂಡನೆ*
- *ಕೊಡಗು ವಿಶ್ವವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ ಡಿಪ್ಲೊಮೋ ಕೋರ್ಸ್ ಲೋಕಾರ್ಪಣೆ : ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು : ಸಚಿವ ಎನ್ ಎಸ್ ಭೋಸರಾಜು ಕರೆ*
- *ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆ : ಸಮಸ್ಯೆಗಳ ಪರಿಹಾರಕ್ಕೆ ಸಚಿವ ಎನ್.ಎಸ್.ಭೋಸರಾಜು ಸೂಚನೆ*
- *ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದಿಂದ ಗುರುವಂದನಾ ಕಾರ್ಯಕ್ರಮ*
- *ಮಡಿಕೇರಿಯಲ್ಲಿ 76 ನೇ ಗಣರಾಜ್ಯೋತ್ಸವದ ಅರ್ಥಪೂರ್ಣ ಆಚರಣೆ*