ವಿರಾಜಪೇಟೆ ಜೂ.5 NEWS DESK : ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಎನ್. ಎಸ್. ಎಸ್ ಘಟಕ, ನೇಚರ್ ಕ್ಲಬ್ ಘಟಕ, ಯುವ ರೆಡ್ ಕ್ರಾಸ್ ಘಟಕ, ಅರಣ್ಯ ಇಲಾಖೆ, ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಗಿಡ ನೆಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಉಪ ಅರಣ್ಯಾಧಿಕಾರಿ ಮಧುಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಗಿಡ ನೆಡುವುದರ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ಪರಿಸರವನ್ನು ಉಳಿಸಿ ಬೆಳೆಸಬೇಕು, ಆ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದ ಅವರು ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆಗೆ ವಹಿಸಿರುವ ಕ್ರಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪ ಮತ್ತು ಪಿಯು ಕಾಲೇಜು ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು, ನಾವು ಪರಿಸರವನ್ನು ಸಂರಕ್ಷಿಸಿದರೆ ಮುಂದೊಂದು ದಿನ ಅದು ನಮ್ಮನ್ನು ಸಂರಕ್ಷಿಸುತ್ತದೆ. ಆ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು, ಮತ್ತು ಪರಿಸರ ಜಾಗೃತಿ ಮೂಡಿಸುವಂತಾಗಬೇಕು ಎಂದ ಅವರು ವಿದ್ಯಾರ್ಥಿ ಹಂತದಿಂದಲೇ ಪರಿಸರದ ಮಹತ್ವವನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳು ಮತ್ತು ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಜೇಮ್ಸ್ ಡೊಮಿನಿಕ್, ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ನೇಚರ್ ಕ್ಲಬ್ ಸಂಚಾಲಕ ಜೇಮ್ಸ್ ಆಂಟೋನಿ, ಯುವ ರೆಡ್ ಕ್ರಾಸ್ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಅರಣ್ಯ ಇಲಾಖೆಯ ಹಮೀದ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಕಾಲೇಜಿನ ಎನ್.ಎಸ್. ಎಸ್. ಅಧಿಕಾರಿ ಬಿ.ಎನ್.ಶಾಂತಿಭೂಷಣ್ ಸ್ವಾಗತಿಸಿ, ನಿರೂಪಿಸಿದರು.