ಸೋಮವಾರಪೇಟೆ ಜೂ.5 NEWS DESK : ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ವಿವಿಧೆಡೆ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ವಸಂತ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಪರಿಸರ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನಲ್ಲೂ ಅನೇಕ ಅನಾಹುತಗಳನ್ನು ಅನುಭವಿಸುತ್ತಿದ್ದೇವೆ, ಮಳೆಗಾಲದಲ್ಲಿ ಬೆಟ್ಟಗುಡ್ಡಗಳು ಕುಸಿಯುತ್ತಿವೆ. ಪ್ರಸಕ್ತ ವರ್ಷ ಅನೇಕ ಕಡೆ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಬೇಕಾಯಿತು. ಬೇಸಿಗೆಯಲ್ಲಿ ಅತೀಹೆಚ್ಚು ಬಿಸಿಲಿನ ತಾಪದಿಂದ ತೊಂದರೆ ಅನುಭವಿಸುವಂತಾಗಿದೆ. ನಾವೆಲ್ಲರೂ ಪರಿಸರ ರಕ್ಷಣೆಗೆ ಪ್ರತಿಜ್ಞೆ ಮಾಡಬೇಕಾಗಿದೆ. ಮನೆಯ ಶುಭ ಸಮಾರಂಭಗಳಲ್ಲಿ ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಸಂಭ್ರಮ ಪಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗು ಮಹಿಳಾ ಸಮಾಜ ಆವರಣದಲ್ಲಿ ಗಿಡ ನೆಡಲಾಯಿತು. ಕಾರ್ಯಕ್ರಮದಲ್ಲಿ ಜೇಸಿಐ ಮಹಿಳಾ ಘಟಕದ ಅಧ್ಯಕ್ಷೆ ವಿನುತ ಸುದೀಪ್, ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಪದಾಧಿಕಾರಿಗಳಾದ ನೆಲ್ಸನ್, ಅರುಣ್ ಕುಮಾರ್, ಮನೋಹರ್, ಪುಷ್ಪಕ್ ಚೌಡ್ಲು ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಸದಸ್ಯೆ ಜ್ಯೋತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ್, ಪಿಡಿಒ ಪೂರ್ಣಕುಮಾರ್, ಮುಖ್ಯ ಶಿಕ್ಷಕಿ ಯಶೋದ ಮತ್ತಿತರರು ಇದ್ದರು.










