ಮಡಿಕೇರಿ ಜೂ.13 NEWS DESK : ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ಜು.6 ಮತ್ತು 7 ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆ `ಡ್ಯಾನ್ಸ್-ಡ್ಯಾನ್ ಸೀಸನ್-1′ ನಡೆಯಲಿದೆ ಎಂದು ಅಕಾಡೆಮಿಯ ಸ್ಥಾಪಕ ಹಾಗೂ ನೃತ್ಯ ಸಂಯೋಜಕ ಕೆ.ಎಸ್.ಅಕ್ತರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ನೃತ್ಯ ಕಾರ್ಯಕ್ರಮಗಳಲ್ಲಿ ಮೊದಲ ಬಾರಿಗೆ ರಿಯಾಲಿಟಿ ಶೋ ಮಾದರಿಯ ನೃತ್ಯ ಸ್ಪರ್ಧೆ ನಡೆಯುತ್ತಿದ್ದು, ಕುಶಾಲನರದ ಸಹಕಾರ ಭವನದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೋಲೋ, ಕಪಲ್ ಹಾಗೂ ಗುಂಪು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಈ ಮೂರು ವಿಭಾಗಗಳಲ್ಲಿಯೂ ಸ್ಪರ್ಧಾಳುಗಳ ವಯೋಮಿತಿ 3 ರಿಂದ 9 ವರ್ಷದ ಮಕ್ಕಳು (ಸಬ್ ಜೂನಿಯರ್ ವಿಭಾಗ), 10 ರಿಂದ 14 ವರ್ಷದ ಮಕ್ಕಳು (ಜೂನಿಯರ್ ವಿಭಾಗ) ಹಾಗೂ 15 ವರ್ಷ ಮೇಲ್ಪಟ್ಟವರ (ಸೀನಿಯರ್ ವಿಭಾಗ)ದಲ್ಲಿ ಸ್ಪರ್ಧೆ ನಡೆಯಲಿದೆ.
ಒಟ್ಟು ರೂ.1.50 ಲಕ್ಷದ ಆಕರ್ಷಕ ನಗದು ಬಹುಮಾನ ಹೊಂದಿದ್ದು, ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಇದರೊಂದಿಗೆ ಬೆಸ್ಟ್ ಕೊರಿಯೋಗ್ರಫರ್, ಬೆಸ್ಟ್ ಪರ್ಫಾರ್ಮರ್, ಬೆಸ್ಟ್ ಟೀಮ್ ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಒಂದು ತಂಡಕ್ಕೆ ಚಾಂಪಿಯನ್‍ಶಿಪ್ ಪ್ರಶಸ್ತಿ ಹಾಗೂ ಭಾಗವಹಿಸಿದ ಪ್ರತೀ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಹಾಗೂ ಪರಿತೋಷಕ ನೀಡಲಾಗುವುದು ಎಂದು ತಿಳಿಸಿದರು.
ನೃತ್ಯ ಸ್ಪರ್ಧೆಯಲ್ಲಿ ಬೆಂಗಳೂರು, ಚಾಮರಾಜನಗರ, ಮೈಸೂರು, ಹಾಸನ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ ಹಾಗೂ ಕೊಡಗು ಸೇರಿದಂತೆ ರಾಜ್ಯದ ವಿವಿಧ ವಿವಿಧ ಜಿಲ್ಲೆಗಳಿಂದ ಹಲವಾರು ಹೆಸರಾಂತ ತಂಡಗಳು, ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ವಿಜೇತರಾದ ಕಲಾವಿದರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಕರ್ನಾಟಕ ಹಾಗೂ ಇತರ ರಾಜ್ಯದ ನೃತ್ಯ ಕಾರ್ಯಕ್ರಮಗಳಲ್ಲಿ ಉತ್ತಮ ತೀರ್ಪುಗಾರಿಕೆಯನ್ನು ನೀಡಿ ಹೆಸರುವಾಸಿಯಾದ ನೃತ್ಯ ಗುರುಗಳು ಆಗಮಿಸಲಿದ್ದಾರೆ.
ನೃತ್ಯ ಕಾರ್ಯಕ್ರಮವು ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿದ್ದು, ಆಸಕ್ತರು ಜೂ.25ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9606302963, 6362257084 ಸಂಪರ್ಕಿಸಬಹುದಾಗಿದೆ. ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಕ್ತರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕರಾದ ಆರ್.ಎಂ.ಶಶಾಂಕ್, ಪಿ.ಎಸ್.ಸೂರ್ಯ, ಸಿ.ಎಸ್.ಅರುಣ್, ಎಂ.ಕೆ.ಕೃತಿಕ್ ಉಪಸ್ಥಿತರಿದ್ದರು.