ಮಡಿಕೇರಿ ಜೂ.13 NEWS DESK : ರಾಷ್ಟ್ರೀಯ ಸಮಗ್ರತೆ ಮತ್ತು ಶಾಂತಿಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಜುಲೈನಲ್ಲಿ ಕೊಡಗಿನಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಉಡುಪಿಯ ಕಡೆಕಾರ್ ನಿವಾಸಿ ಜಯಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಜುಲೈ ಎರಡನೇ ವಾರದಲ್ಲಿ ಪಾದಯಾತ್ರೆ ಆರಂಭಿಸಲಿದ್ದೇನೆ. 40 ದಿನಗಳಲ್ಲಿ 900 ಕಿ.ಮೀ ಕ್ರಮಿಸುವ ಉದ್ದೇಶವಿದ್ದು, ಪಾದಯಾತ್ರೆಯ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ದಿ.ಆಸ್ಕರ್ ಫೆರ್ನಾಂಡಿಸ್ ಬೆಂಬಲಿಗರು ನನ್ನೊಂದಿಗೆ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ದಿವಂಗತ ಆಸ್ಕರ್ ಫೆರ್ನಾಂಡಿಸ್‍ರ ಸರಳತೆ ಮತ್ತು ಸತ್ಯ ನಿಷ್ಟತೆಗೆ ಈ ಪಾದಯಾತ್ರೆಯನ್ನು ಅರ್ಪಿಸುತ್ತಿದ್ದು, ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಯಾತ್ರೆಯನ್ನು ಕೈಗೊಂಡಿರುವುದಾಗಿ ಹೇಳಿದರು.
2017ರಲ್ಲಿ ಉಡುಪಿಯಿಂದ ಮುಂಬೈಗೆ 32 ದಿನಗಳ 1050 ಕಿ.ಮೀ. ದೂರದ ಪಾದಯಾತ್ರೆ, ಸಾಬರಮತಿಯಿಂದ ದಂಡಿಗೆ 14 ದಿನಗಳಲ್ಲಿ 410 ಕಿ.ಮೀ. ಮತ್ತು ದೆಹಲಿಯಿಂದ ವಾಘಾ-ಅಟ್ಟಾರಿ ಗಡಿಯವರೆಗೆ 16 ದಿನಗಳಲ್ಲಿ 500 ಕಿ.ಮೀ. ಪಾದಯಾತ್ರೆ ನಡೆಸಿರುವುದಾಗಿ ಮಾಹಿತಿ ನೀಡಿದ ಜಯಪ್ರಕಾಶ್ ಶೆಟ್ಟಿ, ಈ ಎಲ್ಲಾ ಪಾದಯಾತ್ರೆಗಳಿಗೆ ಕೇಂದ್ರದ ಮಾಜಿ ಸಚಿವ ದಿ.ಆಸ್ಕರ್ ಫೆರ್ನಾಂಡಿಸ್ ತನಗೆ ಸ್ಫೂರ್ತಿಯಾಗಿದ್ದಾರೆ. ಆಸ್ಕರ್ ಫರ್ನಾಂಡಸ್ ಅವರು ಹೊಸದಿಲ್ಲಿಯ ತಮ್ಮ ಕಚೇರಿಯಿಂದ ವಾಘಾ-ಅಟ್ಟಾರಿ ಗಡಿಯವರೆಗಿನ ಪಾದಯಾತ್ರೆಗೆ ಚಾಲನೆ ನೀಡಿ ತನ್ನೊಂದಿಗೆ ಸ್ವಲ್ಪ ದೂರದವರೆಗೆ ಕ್ರಮಿಸಿದ್ದನ್ನು ಇದೇ ಸಂದರ್ಭ ಜಯಪ್ರಕಾಶ್ ಶೆಟ್ಟಿ ಸ್ಮರಿಸಿಕೊಂಡರು.