ಸುಂಟಿಕೊಪ್ಪ ಜೂ.13 NEWS DESK : ಹರದೂರು ಅಂಚೆ ಕಚೇರಿಯಲ್ಲಿ ಕಳೆದ 42 ವರ್ಷಗಳಿಂದ ಪೋಸ್ಟ್ ಮಾಸ್ಟರಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ಬಿ.ಜಿನ್ನಪ್ಪ ಅವರು ನಿವೃತ್ತಿ ಹೊಂದಿದ್ದು, ಅವರ ಸೇವೆಯನ್ನು ಸ್ಮರಿಸಿ ಹರದೂರು ಗ್ರಾಮಸ್ಥರು ಬೀಳ್ಕೊಡುಗೆ ನೀಡಿದರು.
ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹರದೂರು, ಗರಗಂದೂರು ಗ್ರಾಮಸ್ಥರು ಬಿ.ಬಿ.ಜಿನ್ನಪ್ಪ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾ.ಪಂ ಸದಸ್ಯ ಎ.ಸಿ.ಸುಬ್ಬಯ್ಯ, ಬಿ.ಬಿ.ಜಿನ್ನಪ್ಪ ಅವರು ಗ್ರಾಮ ವ್ಯಾಪ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಭಾಗದ ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಸಮಾಜ ಸೇವೆಯಲ್ಲಿ ಮುಂದಾಗಿದ್ದ ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಗ್ರಾಮಸ್ಥರಾದ ಚಂಗಪ್ಪ ಮಾತನಾಡಿ, ಪೋಸ್ಟ್ ಮಾಸ್ಟರಾಗಿ ನಗು ನಗುತ್ತಾ ಕಾರ್ಯನಿರ್ವಹಿಸುತ್ತಿದ್ದರು. ಜನರ ಸೇವೆಯಲ್ಲಿ ಮುಂದಾಗಿದ್ದ ಇವರು ಎಲ್ಲರೊಂದಿಗೆ ಬೆರೆತು ಜನರ ಕಷ್ಟಗಳಿಗೆ ನೆರವಾಗುತ್ತಿದ್ದರು ಇವರ ಸೇವೆ ಸ್ಮರಣೀಯ ಎಂದರು.
ಈ ಸಂದರ್ಭ ಗ್ರಾಮಸ್ಥರಾದ ಎ.ಸಿ.ಪೊನ್ನಪ್ಪ, ಎಂ.ಎ.ವಸಂತ, ರಾಘವೇಂದ್ರ ಭಟ್, ಉಮೇಶ್‍ಚಂದ್ರ(ಪವಿ), ಸತೀಶ್‍ಚಂದ್ರ, ಎಸ್.ವಿಶ್ವನಾಥ್, ಶ್ರುತಿ ವಿಸ್ವನಾಥ್ ಹಾಗೂ ಮತ್ತಿತರ ಗ್ರಾಮಸ್ಥರು ಹಾಜರಿದ್ದರು.