ಮಡಿಕೇರಿ ಜೂ.13 NEWS DESK : ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವ ಕುರಿತು ಪ್ರವಾಸೋದ್ಯಮ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಅಭಿವೃಧ್ಧಿ ಪಡಿಸಬೇಕು. ಮೂಲಸೌಲಭ್ಯಗಳನ್ನು ಕಲ್ಪಿಸಬೇಕು, ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ಬಳಕೆ ಹಾಗೂ ಗೃಹ ಬಳಕೆ ವಿದ್ಯುತ್ ಶುಲ್ಕ ಸಂಬಂಧ ಒಂದೇ ರೀತಿಯ ಡೆಫಿನೇಶನ್ ಇರಬೇಕು. ವಿದ್ಯುತ್ ಶುಲ್ಕ ಸಂಬಂಧ ಪ್ರವಾಸೋದ್ಯಮ ಸಚಿವರು, ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಆರು ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮದ ಆಕರ್ಷಣೆಗೆ ಸ್ವಚ್ಛತೆ ಕಾಪಾಡುವುದು ಅಗತ್ಯ, ಎಲ್ಲೆಂದರಲ್ಲಿ ಕಸ ಹಾಕಬಾರದು. ಪ್ಲಾಸ್ಟಿಕ್‌ನ್ನು ಕಡ್ಡಾಯವಾಗಿ ಬಳಸಬಾರದು. ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸಿ ನೀಡಬೇಕು. ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಡಾ.ಮಂತರ್ ಗೌಡ ಅವರು ಸಲಹೆ ನೀಡಿದರು.
ಈ ಸಂದರ್ಭ ಮಾತನಾಡಿದ ಹೋಂ ಸ್ಟೇ ಅಸೋಷಿಯೇಷನ್‌ನ ಪ್ರತಿನಿಧಿಗಳು ನೋಂದಾಯಿತ ಹೋಂಸ್ಟೇ ಅವರು ಮನೆಯಲ್ಲಿ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ಮಾಡುತ್ತಾರೆ. ಅದನ್ನು ಬಿಟ್ಟು ಹೋಟೆಲ್ ಮಾದರಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಆದ್ದರಿಂದ ಗೃಹ ಬಳಕೆಯಂತೆ ವಿದ್ಯುತ್ ನ್ನು ನೀಡಬೇಕು ಎಂದು ಅವರು ಕೋರಿದರು.
ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ ಎಂಜಿನಿಯರ್‌ಗಳು ತಪಾಸಣೆ ಕೈಗೊಂಡು ವಾಣಿಜ್ಯ ಬಳಕೆಯಂತೆ ವಿದ್ಯುತ್ ದರ ನಿಗಧಿ ಮಾಡುತ್ತಾರೆ. ಇದರಿಂದ ಹೋಂಸ್ಟೇ ನಡೆಸುವವರಿಗೆ ತುಂಬಾ ತೊಂದರೆಯಾಗಿದೆ ಎಂದು ಹೋಂಸ್ಟೇ ಪ್ರತಿನಿಧಿಗಳು ಶಾಸಕರ ಗಮನಕ್ಕೆ ತಂದರು.
ಈ ಕುರಿತು ಪ್ರತಿಕ್ರಿಯಿಸಿದ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಅವರು ಪ್ರವಾಸೋದ್ಯಮ ನೀತಿಯಡಿ ಹೋಂ ಸ್ಟೇ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿಯ ಎಂಜಿನಿಯರ್ ಮಾತನಾಡಿ ವಿದ್ಯುತ್ ನಿಗಮದಿಂದ ವಾಣಿಜ್ಯ ಮತ್ತು ಗೃಹ ಬಳಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಲಾಗಿರುವ ಆದೇಶಗಳನ್ನು ಪಾಲಿಸಲಾಗುತ್ತಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಕೃಷಿ ಜೊತೆಗೆ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ. ಇದರಿಂದ ಉದ್ಯೋಗ ಸೃಷ್ಟಿ ಮಾಡಲು ಸಹಕಾರಿಯಾಗಲಿದೆ ಎಂದು ಹೋಂಸ್ಟೇ ಅಸೋಷಿಯೇಷನ್ ಮಾಜಿ ಅಧ್ಯಕ್ಷ ಕರುಂಬಯ್ಯ ಅವರು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ಪವಿತ್ರ ದೇವಾಲಯಗಳು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಮತ್ತಷ್ಟು ಕ್ರಮವಹಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲೆಡೆ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬರೆಸಬೇಕು. ಇದನ್ನು ಚಾಚೂ ತಪ್ಪದೇ ಪಾಲಿಸಬೇಕು. ಇದುವರೆಗೆ ಈ ರೀತಿ ನಾಮಫಲಕ ಬರೆಸದಿದ್ದಲ್ಲಿ ಶೀಘ್ರ ನಾಮಫಲಕಗಳನ್ನು ಬದಲಿಸುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕೋರಿದರು.
ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹೋಂಸ್ಟೇ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಶುಲ್ಕ ಪಡೆಯಲಾಗುತ್ತಿದ್ದು, ಒಂದೇ ರೀತಿಯ ಶುಲ್ಕ ಪಾವತಿಸಿಕೊಳ್ಳಬೇಕು ಎಂದು ಮೋಂತಿ ಗಣೇಶ್ ಅವರು ಮನವಿ ಮಾಡಿದರು.
ಈ ಕುರಿತು ಪ್ರಕ್ರಿಯಿಸಿದ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಗ್ರಾಮ ಪಂಚಾಯಿತಿ ಆಡಳಿತದಲ್ಲಿ ತಮ್ಮದೇ ಆದ ಸದಸ್ಯರನ್ನು ಹೊಂದಿರುವ ಸ್ಥಳೀಯ ಸಂಸ್ಥೆಯಾಗಿದ್ದು, ಸ್ಥಳೀಯ ಸಂಪನ್ಮೂಲವನ್ನು ಗಮನಿಸಿಕೊಂಡು ತೆರಿಗೆ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ. ಆ ನಿಟ್ಟಿನಲ್ಲಿ ಜಿ.ಪಂ.ಮಧ್ಯ ಪ್ರವೇಶ ಮಾಡುವುದಿಲ್ಲ ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಹೋಂ ಸ್ಟೇ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ. ಒಂದು ಮನೆಯಲ್ಲಿ 6 ರಿಂದ 8 ಕೊಠಡಿಯಲ್ಲಿ ಹೋಂಸ್ಟೇ ನಡೆಸಬಹುದಾಗಿದೆ ಎಂದರು.
ಹೋಂಸ್ಟೇ ನಡೆಸಲು ಪ್ರವಾಸೋದ್ಯಮ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಅನುಮತಿ ಪಡೆಯಬೇಕಿದೆ. ಪೊಲೀಸ್ ಇಲಾಖೆಯಿಂದ ಎನ್‌ಒಸಿ ಪಡೆಯಬೇಕಿದೆ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿ ಐ.ಪಿ.ಮೇದಪ್ಪ ಅವರು ಮಾತನಾಡಿ ಸಿಸಿಟಿವಿ ಇರಬೇಕು. ವಾಹನ ನಿಲುಗಡೆ ಜಾಗ ಇರಬೇಕು. ಹತ್ತಿರದವರಿಂದ ಯಾವುದೇ ರೀತಿಯ ಆಕ್ಷೇಪಣೆ ಇಲ್ಲದಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಹೋಂಸ್ಟೇ ನಡೆಸುವ ಮಾಲೀಕರ ವಿರುದ್ದ ಪೊಲೀಸ್ ಇಲಾಖೆಯಲ್ಲಿ ಯಾವುದೇ ದೂರು ಇರಬಾರದು. ಅಂತವರಿಗೆ 10 ದಿನದೊಳಗೆ ಎನ್‌ಒಸಿ ನೀಡಲಾಗುತ್ತದೆ ಎಂದು ತಿಳಿಸಿದರು.
ಹೋಂಸ್ಟೇ ಅಸೋಷಿಯೇಷನ್‌ನ ಅಮರನಾಥ್ ಬಿ., ನಳಿನಿ ಅಚ್ಚಯ್ಯ, ಉಷಾ ಗಣಪತಿ, ಸಿ.ಸಿ.ತಿಮ್ಮಯ್ಯ, ಎನ್.ಕೆ.ಚಂಗಪ್ಪ, ಮಿಕ್ಕಿ ಕಾಳಪ್ಪ, ಕೆ.ಎಂ.ಕರುಂಬಯ್ಯ, ಎಂ.ಮೀನಾ ಕಾರ್ಯಪ್ಪ, ಪಿ.ಕೆ.ಹೆಮಾ ಮಾದಪ್ಪ, ಬಿ.ಎ.ಅಚ್ಚಯ್ಯ, ಸತೀಶ್ ರೈ, ಬಿ.ಪಿ.ಗಣಪತಿ, ಎ.ಎಸ್.ಮಲ್ಲೇಶ್ ಅವರು ಹಲವು ವಿಷಯ ಪ್ರಸ್ತಾಪಿಸಿದರು.