ಸೋಮವಾರಪೇಟೆ ಜೂ.14 : ನಿವೇಶನ ರಹಿತ ಕೂಲಿ ಕಾರ್ಮಿಕರಿಗೆ, ಬಡವರಿಗೆ, ಆದಿವಾಸಿಗಳಿಗೆ ಸರ್ಕಾರ ನಿವೇಶನ ಕಲ್ಪಿಸಬೇಕೆಂದು ಆಗ್ರಹಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿತು.
ಯೂನಿಯನ್ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ನೇತೃತ್ವದಲ್ಲಿ ವಿವೇಕಾನಂದ ಸರ್ಕಲ್‍ನಿಂದ ಪ್ರಮುಖ ಸೋಮವಾರಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಕಾರರು ಜೇಸಿ ವೇದಿಕೆಯಲ್ಲಿ ಸಮಾವೇಶಗೊಂಡ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರು ಸ್ವಂತ ನಿವೇಶನವಿಲ್ಲದೆ ಮಾಲೀಕರ ಲೈನ್ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ಮಾಡಲಾಗುತ್ತಿದೆ. ಮಾದಾಪುರ, ಹರದೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಪೈಸಾರಿ ಜಾಗ ಗುರುತಿಸಿ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ನಿವೇಶನ ರಹಿತರಿಗೆ ನಿವೇಶನ ನೀಡಿಲ್ಲ ಎಂದು ಸೋಮಪ್ಪ ದೂರಿದರು.
ಜಿಲ್ಲೆಯಲ್ಲಿರುವ ಪೈಸಾರಿ ಜಾಗ ಉಳ್ಳವರ ಪಾಲಾಗುತ್ತಿದೆ. ಸ್ವಾತಂತ್ರ್ಯ ಸಿಕ್ಕಿ 7 ದಶಕಗಳು ಕಳೆದರೂ ಕಾರ್ಮಿಕರಿಗೆ ವಾಸಕ್ಕೆ ಮನೆ ಕೊಡದ ಸರ್ಕಾರಗಳಿಗೆ ಧಿಕ್ಕಾರವಿರಲಿ ಎಂದರು.
ಜಿಲ್ಲೆಯಲ್ಲಿ ಕಾಡಾನೆ, ಹುಲಿದಾಳಿಗೆ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಸಂದರ್ಭ ಕಾಡಾನೆ ದಾಳಿಯಿಂದ ಗಾಯಗೊಂಡ ಕಾರ್ಮಿಕರಿಗೆ ಪರಿಹಾರವನ್ನು ನೀಡದೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದಲಿತ ಹಿತರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಹೋರಾಟ, ಚಳುವಳಿ ಮಾಡದಿದ್ದರೆ ಕಾರ್ಮಿಕರು, ಆದಿವಾಸಿಗಳು ಬದುಕಲು ಸಾಧ್ಯವಿಲ್ಲ. ಬೆವರು, ರಕ್ತ ಸುರಿಸಿ ಕಾಫಿ, ಭತ್ತ, ಕಾಳುಮೆಣಸು ಉತ್ಪಾದನೆ ಕೊಡುಗೆ ನೀಡಿದ್ದಾರೆ. ಇದ್ದ ಪೈಸಾರಿ ಜಾಗವನ್ನು ಭೂಮಾಲೀಕರಿಗೆ ಲೀಜ್ ಕೊಡುತ್ತಿದ್ದಾರೆ. ಮಾಲೀಕರ ಹಂದಿಗೂಡಿನಂತಿರುವ ಲೈನ್ ಮನೆಗಳಲ್ಲಿ ಕಾರ್ಮಿಕರು ಪ್ರಾಣಿಗಳಂತೆ ಬದುಕಬೇಕಾಗಿದೆ. ಕಾರ್ಮಿಕರು ಒಗ್ಗಟ್ಟಾಗದಿದ್ದರೆ ಎಲ್ಲವನ್ನು ಕಳೆದುಕೊಂಡು ಬೀದಿ ಪಾಲಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ತಶೀಲ್ದಾರ್ ಸುಶೀಲಾ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಿವೇಶನ ರಹಿತ ಕಾರ್ಮಿಕರ ಸಭೆ ಕರೆದು ಚರ್ಚಿಸಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐ ತಾಲ್ಲೂಕು ಕಾರ್ಯದರ್ಶಿ ಶಬಾನ, ಕಾರ್ಮಿಕ ಮುಖಂಡರಾದ ಪಿ.ಟಿ.ಸುಂದರ, ಸೋಮ, ಶೇಷಪ್ಪ, ಗಣೇಶ್ ಮತ್ತಿತರರು ಇದ್ದರು.