ಕುಶಾಲನಗರ ಜೂ.17 NEWS DESK : ತ್ಯಾಗ, ಬಲಿದಾನದ ಹಬ್ಬವಾದ ಬಕ್ರೀದ್ ಹಬ್ಬವನ್ನು ಕುಶಾಲನಗರದ ಶಾಫಿ ಹಾಗೂ ಹನಫಿ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ಬೆಳಿಗ್ಗೆ ಮಸೀದಿಗೆ ಆಗಮಿಸಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದ ಮುಸಲ್ಮಾನರು, ಒಳ್ಳೆಯ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು. ನಂತರ ಸರ್ವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಸರ್ವರೂ ಸಾಮರಸ್ಯದಿಂದ ಬದುಕುವಂತೆ ಮನವಿ ಮಾಡಿದರು.
ಕುಶಾಲನಗರದ ಹಿಲಾಲ್ ಮಸೀದಿ, ಜಾಮಿಯಾ ಮಸೀದಿ, ತಕ್ವಾ ಮಸೀದಿ, ದಂಡಿನಪೇಟೆ, ಜನತಾ ಕಾಲೋನಿ, ಕೂಡಿಗೆ, ನಂಜರಾಯಪಟ್ಟಣ, ಕೊಡಗರಹಳ್ಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಎಲ್ಲಾ ಮಸೀದಿಗಳ ಮುಂಭಾಗ ಪೊಲೀಸರು ಬಂದೋಬಸ್ತ್ ನೀಡಿದ್ದರು.
ಈ ಸಂದರ್ಭ ಕುಶಾಲನಗರದ ಹಿಲಾಲ್ ಮಾಸೀದಿ ಧರ್ಮಗುರುಗಳಾದ ನಾಸರ್ ಫೈಜಿ಼, ಹಿಲಾಲ್ ಮಸೀದಿ ಅಧ್ಯಕ್ಷ ಹುಸೇನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಬಕ್ರೀದ್ ಹಬ್ಬದ ಕುರಿತು ಮಾತನಾಡಿದರು.