ಮಡಿಕೇರಿ ಜೂ.17 NEWS DESK : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಸೈಕಲ್ ತುಳಿದು, ಕಾರನ್ನು ಹಗ್ಗದಿಂದ ಎಳೆಯುವ ಮೂಲಕ ರಾಜ್ಯ ಸರ್ಕಾರದ ಬೆಲೆ ಏರಿಕೆಯ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಮಾಜಿ ಎಂಎಲ್‍ಸಿಗಳಾದ ಸುನಿಲ್ ಸುಬ್ರಮಣಿ, ಎಸ್.ಜಿ.ಮೇದಪ್ಪ ಸೇರಿದಂತೆ ಕಾರ್ಯಕರ್ತರು ಜ.ತಿಮ್ಮಯ್ಯ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‍ಗೆ ಲೀಟರ್‍ವೊಂದಕ್ಕೆ ಅನುಕ್ರಮವಾಗಿ 3 ಮತ್ತು 3.50 ರೂ.ಗಳನ್ನು ಹೆಚ್ಚಳ ಮಾಡಿರುವ ಮೂಲಕ, ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಇದು ಸರ್ಕಾರದ ಜನವಿರೋಧಿ ನೀತಿಯಾಗಿದ್ದು, ಇನ್ನು ಮುಂದೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸರ್ಕಾರ ತಕ್ಷಣ ತನ್ನ ಧೋರಣೆಯನ್ನು ಬದಲಿಸಿ ಬೆಲೆ ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.
::: ಕಾರನ್ನೆಳೆದರು :::
ರಾಜ್ಯ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹೆಚ್ಚಳದ ಮೂಲಕ ಜನಸಾಮಾನ್ಯರ ಬದುಕಿಗೆ ಸಂಕಷ್ಟವನ್ನು ಉಂಟು ಮಾಡಿದೆ. ದರ ಹೆಚ್ಚಳದಿಂದ ಇನ್ನು ಮುಂದೆ ಪೆಟ್ರೋಲ್, ಡೀಸೆಲ್ ಗಾಡಿ ಓಡಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಟೀಕಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಸೈಕಲ್ ತುಳಿದು, ಹಗ್ಗದ ಮೂಲಕ ಕಾರು ಎಳೆದು ಸರ್ಕಾರದ ನಿಲುವನ್ನು ವಿರೋಧಿಸಿದರು. ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ರವಿಕಾಳಪ್ಪ ಅವರು ಸೈಕಲ್ ಏರಿ ಗಮನ ಸೆಳೆದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ.ಲೋಕೇಶ್, ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷ ಮನು ಮಂಜುನಾಥ್, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಯಮುನಾ ಚಂಗಪ್ಪ, ನಾಳನ ಕನ್ನಿಕೆ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.