ಮಡಿಕೇರಿ ಜೂ.19 NEWS DESK : ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡುವ ಮತ್ತು ಉಜ್ವಲ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕರ್ತವ್ಯ ನಿರ್ವಹಿಸಬೇಕು ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಓ.ಎಂ.ಪಂಕಜಾಕ್ಷನ್ ಅವರು ಕರೆ ನೀಡಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಇಂದಿನಿಂದ ಜೂ.24 ರವರೆಗೆ ಶಿಕ್ಷಕರಿಗಾಗಿ ನಡೆಯುವ ಮೂಲ ತರಬೇತಿ ಮತ್ತು ಮುಂದುವರೆದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತರಬೇತಿ ಶಿಬಿರಗಳು ಬದಲಾವಣೆಗೆ ದಾರಿಯಾಗಿದೆ, ಶಿಸ್ತು ರೂಪಿಸುತ್ತದೆ. ಸಮಾಜಮುಖಿಯಾಗಿ ಬೆಳೆಯಲು ಸಹಕರಿಸುತ್ತದೆ, ಸಕಾರಾತ್ಮಕ ಚಿಂತನೆ, ದೃಢತೆ, ವಿಶ್ವಾಸ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಚಿಂತನೆ ಬಿಡಲು ಸಹಕಾರಿಯಾಗಿದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ಎಲ್ಲರಿಗೂ ಉತ್ತಮ ಸಂದೇಶವನ್ನು ನೀಡುತ್ತದೆ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಉತ್ತಮ ಮಾರ್ಗದರ್ಶನದಲ್ಲಿ ಕೊಂಡೊಯ್ಯಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ನಕರಾತ್ಮಕ ವಿಚಾರಗಳಿಗೆ ವಿದ್ಯಾರ್ಥಿಗಳು ಆಕರ್ಷಿತರಾಗದಂತೆ ನೋಡಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಯಾವಾಗಲು ವಿಭಿನ್ನವಾಗಿ ಆಲೋಚಿಸುವಂತೆ ಮಾಡಬೇಕು. ವಿದ್ಯಾರ್ಥಿಗಳ ಆಸಕ್ತ ವಿಷಯಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಮುಂದಿನ ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಗರಸಭೆ ಪೌರಾಯುಕ್ತ ವಿಜಯ್, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ತರಬೇತಿ ಮುಖ್ಯ. ಒಬ್ಬ ವ್ಯಕ್ತಿ ಯಾವುದೇ ಕಾರ್ಯ ಮಾಡಬೇಕಾದರೂ ಅದಕ್ಕೆ ತರಬೇತಿಯ ಅಗತ್ಯವಿದೆ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ತರಬೇತಿಯ ಅವಶ್ಯಕತೆ ಇದ್ದು, ಇದಕ್ಕೆ ಅಂತ್ಯ ಹಾಗೂ ಆರಂಭವೆನ್ನುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ತರಬೇತಿ ಪಡೆಯಲು ವಯಸ್ಸಿನ ಅವಶ್ಯಕತೆ ಇಲ್ಲ. ತರಬೇತಿ ಪಡೆಯುವುದರಿಂದ ಮನುಷ್ಯನ ಜ್ಞಾನಾರ್ಜನೆ ಹೆಚ್ಚಾಗಲಿದೆ. ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಉತ್ತಮ ತರಬೇತಿ ಪಡೆದುಕೊಂಡು ಮತ್ತೊಬ್ಬರಿಗೆ ತಿಳಿ ಹೇಳುವ ಕೆಲಸವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ, ಶಿಕ್ಷಕರು ಶಿಲ್ಪಿಗಳಿಗೆ ಸಮಾನ, ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ ಉತ್ತಮ ಮಾರ್ಗದರ್ಶನ ನೀಡಿದರೆ ನಮ್ಮ ದೇಶದ ಅತ್ಯಮೂಲ್ಯ ವ್ಯಕ್ತಿಗಳಾಗುತ್ತಾರೆ ಎಂದರು.
ಸರ್ಕಾರದ ಆದೇಶದ ಮೇರೆಗೆ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಆಡಳಿತ ಮಂಡಳಿ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುಳಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಶಾಲೆಯಲ್ಲಿ ಪಾಠದ ಜೊತೆಗೆ ಶಿಸ್ತು, ದೃಢ ನಿರ್ಧಾರ, ಮುನ್ನುಗುವ ಸ್ವಭಾವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದಿನ ನಾಗರೀಕ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿದ್ದು, ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಗಷ್ಟೆ ಸೀಮಿತಗೊಳಿಸದೆ ತರಬೇತಿಯ ಮೂಲಕ ಸಂಯಮ, ಚಿಂತನೆ, ಪರೋಪಕಾರ, ಸಮಾಜಮುಖಿ ಕಾರ್ಯಗಳ ಬಗ್ಗೆ ತಿಳಿಸಿಕೊಡಬೇಕು. ಇದರಿಂದ ಹೆಚ್ಚು ಅಂಕಗಳ ಜೊತೆಗೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಮೂಲ ತರಬೇತಿ ಮತ್ತು ಮುಂದುವರೆದ ತರಬೇತಿ ಜೂ.24ರ ವರೆಗೆ ನಡೆಯಲಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಶಿಕ್ಷಕರು ಪಾಲ್ಗೊಂಡಿದ್ದಾರೆ. ಶಿಬಿರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮೂಲ ಉದ್ದೇಶ, ದ್ಯೇಯಗಳು, ಧ್ವಜಾರೋಹಣ ಮತ್ತು ಪ್ರಥಮ ಚಿಕಿತ್ಸೆ, ಶಾರೀರಿಕ ವ್ಯಾಯಾಮ, ಕೌಶಲ್ಯ ಸೇರಿದಂತೆ ವಿವಿಧ ವಿಚಾರಗಳ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲಾ ಗೈಡ್ಸ್ ಆಯುಕ್ತರಾದ ರಾಣಿ ಮಾಚಯ್ಯ, ಜಿಲ್ಲಾ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಗೈಡ್ಸ್ ತರಬೇತಿ ಆಯುಕ್ತರಾದ ಮೈಥಿಲಿ ರಾವ್, ಸಹಾಯಕ ಗೈಡ್ಸ್ ಆಯುಕ್ತರಾದ ಸುಲೋಚನ, ತರಬೇತಿ ನಾಯಕರಾದ ಶಿವಶಂಕರ್, ಗೈಡ್ಸ್ ವಿಭಾಗದ ಸಹ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್, ಸ್ಥಾನಿಕ ಆಯುಕ್ತ ಹೆಚ್.ಆರ್.ಮುತ್ತಪ್ಪ, ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ, ಪ್ರಮುಖರಾದ ಕುಮಾರಸ್ವಾಮಿ, ಗಣೇಶ್, ಬೋಜಮ್ಮ ಮತ್ತಿತರರು ಉಪಸ್ಥಿತರಿದ್ದರು.
ಸ್ಕೌಟ್ಸ್ ತರಬೇತಿ ಆಯುಕ್ತ ರಂಜಿತ್ ಸ್ವಾಗತಿಸಿ, ಪೊನ್ನಂಪೇಟೆ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ವಾಮನ ನಿರೂಪಿಸಿ, ಸಹಾಯಕ ತರಬೇತಿ ಆಯುಕ್ತರಾದ ಆಲಿಮಾ ವಂದಿಸಿದರು.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್‌ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*