ಮಡಿಕೇರಿ ಜೂ.22 NEWS DESK : ಶಾಸಕ ಸ್ಥಾನಕ್ಕೆ ಎಲ್ಲೂ ಚ್ಯುತಿ ಬಾರದ ರೀತಿಯಲ್ಲಿ ಜನಪರ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಅಜಾತ ಶತ್ರು ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹಿಸುವ ಮೂಲಕ ಬಿಜೆಪಿ ಕೊಡಗಿನ ಪ್ರಬುದ್ಧ ರಾಜಕಾರಣಕ್ಕೆ ಕಳಂಕ ತಂದಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡಲು ಸ್ವಾತಂತ್ರ್ಯವಿದೆ. ಆದರೆ ಯಾವುದೇ ತಪ್ಪು ಮಾಡದ, ಉತ್ತಮ ವ್ಯಕ್ತಿತ್ವದ ಜನನಾಯಕರೊಬ್ಬರನ್ನು ಗುರಿ ಮಾಡಿ ರಾಜಕೀಯ ಕಾರಣಕ್ಕಾಗಿ ಅಗೌರವ ತೋರುವುದು ಖಂಡನೀಯವೆಂದು ತಿಳಿಸಿದ್ದಾರೆ.
ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಅನೇಕ ಪ್ರಬುದ್ಧ ರಾಜಕಾರಣಿಗಳಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಕೊಡಗು ತನ್ನದೇ ಆದ ಘನತೆಯನ್ನು ಉಳಸಿಕೊಂಡಿದೆ. ಇದೇ ಪ್ರಬುದ್ಧತೆ ಎ.ಎಸ್.ಪೊನ್ನಣ್ಣ ಅವರ ಬಳಿ ಇರುವುದರಿಂದಲೇ ಅವರು ಇಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದಾರೆ. ಮುಂದೊಂದು ದಿನ ರಾಜಕೀಯವಾಗಿ ಉನ್ನತ ಸ್ಥಾನವನ್ನು ಅಲಂಕರಿಸಬಲ್ಲ ಎಲ್ಲಾ ಸಾಮಥ್ರ್ಯ ಹೊಂದಿರುವ ಪೊನ್ನಣ್ಣ ಅವರನ್ನು ಹೇಗಾದರು ಮಾಡಿ ಹಣಿಯಬೇಕು ಎನ್ನುವ ಕಾರಣಕ್ಕಾಗಿ ಬಿಜೆಪಿ ಪ್ರತಿಕೃತಿ ದಹಿಸಿ ಕ್ಷುಲ್ಲಕ ರಾಜಕಾರಣ ಪ್ರದರ್ಶಸಿದೆ ಎಂದು ಯಾಕುಬ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಗೌರವದ ಸ್ಥಾನ ಹೊಂದಿರುವ ಪೊನ್ನಣ್ಣ ಅವರಿಗೆ ಅಗೌರವ ತೋರುವ ಮೂಲಕ ಬಿಜೆಪಿ ಇಡೀ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನರನ್ನು ಅವಮಾನಿಸಿದೆ. ಆದ್ದರಿಂದ ಬಿಜೆಪಿ ಬೇಷರತ್ತಾಗಿ ಕ್ಷೇತ್ರದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
2022 ರಲ್ಲಿ 50 ಕೆಜಿ ಪೊಟ್ಯಾಶ್ ರಸಗೊಬ್ಬರದ ಬೆಲೆ ರೂ.800 ಇತ್ತು. ಇದು ಎನ್‍ಡಿಎ ಸರಕಾರದ ಅವಧಿಯಲ್ಲಿ ಏಕಾಏಕಿ ರೂ.1700ಕ್ಕೆ ಏರಿಕೆಯಾಯಿತು. 2021 ರಲ್ಲಿ ರೂ.900 ಇದ್ದ ಫ್ಯಾಕ್ಟಮ್ ಫಾಸ್ ದರ ರೂ.1300 ಆಯಿತು. 10.26.26. ರಸಗೊಬ್ಬರ ರೂ.1050 ರಿಂದ 1470, 15.15.15 ಸುಫಲ 850 ರಿಂದ ರೂ.1400, ಇಫ್ಕೊ 15.15.15- 850 ರಿಂದ ರೂ.1260, ರಾಕ್ ಪಾಸ್ಪಟ್ ರೂ.200 ರಿಂದ 400 ಆಯಿತು. 2014 ರಲ್ಲಿ ರೂ.450 ಇದ್ದ ಅಡುಗೆ ಸಿಲಿಂಡರ್ ದರ ರೂ.1100 ಕ್ಕೆ ತಲುಪಿತು. ಡೀಸೆಲ್, ಪೆಟ್ರೋಲ್ ದರ ರೂ.60-70 ರಿಂದ 100 ರ ಗಡಿ ದಾಟಿತು. ಇಷ್ಟು ದರ ಏರಿಕೆಯಾದರೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದ ಬಿಜೆಪಿ ಇದೀಗ ಡೀಸೆಲ್, ಪೆಟ್ರೋಲ್ ದರ ರೂ.3 ಮತ್ತು 3.50 ಏರಿಕೆಯಾಗಿದೆ ಎಂದು ಪ್ರತಿಭಟನೆಗಿಳಿದಿದೆ. ಇದು ರಾಜಕೀಯ ದುರುದ್ದೇಶದ ಪ್ರತಿಭಟನೆಯೇ ಹೊರತು ಜನಪರ ಕಾಳಜಿಯ ಹೋರಾಟವಲ್ಲವೆಂದು ಕೆ.ಎ.ಯಾಕುಬ್ ಆರೋಪಿಸಿದ್ದಾರೆ.