ಮಡಿಕೇರಿ ಜೂ.27 NEWS DESK : ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಆರ್ದ್ರಾ ಮಳೆ ತೀವ್ರತೆಯನ್ನು ಪಡೆದುಕೊಂಡಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಕಳೆದ 24 ಗಂಟೆಗಳಲ್ಲಿ ಭಾಗಮಂಡಲದಲ್ಲಿ ದಾಖಲೆಯ 8 ಇಂಚು ಮಳೆಯಾಗಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿ ಮಡಿಕೇರಿ ಮತ್ತು ನಾಪೋಕ್ಲು ರಸ್ತೆ ಜಲಾವೃತಗೊಂಡಿದೆ. ನೂತನ ಮೇಲು ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಗದ್ದೆ, ತೋಟಗಳಿಗೂ ನೀರು ನುಗ್ಗಿದ್ದು, ಕೃಷಿಕ ವರ್ಗ ನಷ್ಟ ಅನುಭವಿಸಿದೆ. ಮಡಿಕೇರಿ ನಗರದಲ್ಲೂ ಮಳೆಯಾಗುತ್ತಿದ್ದು, ತೋಡು, ಚರಂಡಿಗಳು ತುಂಬಿ ಹರಿಯುತ್ತಿವೆ. ಕೆಲವು ಭಾಗದಲ್ಲಿ ಮಳೆಯ ನೀರಿನ ರಭಸಕ್ಕೆ ರಸ್ತೆಗಳ ಡಾಂಬರು ಮತ್ತು ಕಾಂಕ್ರೀಟ್ ಕೊಚ್ಚಿ ಹೋಗಿದೆ. ತ್ಯಾಗರಾಜ ಕಾಲೋನಿಯಲ್ಲಿ ಬರೆ ಬಿದ್ದು ಮೂರು ಮನೆಗಳಿಗೆ ಹಾನಿಯಾಗಿದೆ. ಬೆಟ್ಟ ಮತ್ತು ತಗ್ಗು ಪ್ರದೇಶದಲ್ಲಿರುವ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ನಗರಸಭೆ ಈಗಾಗಲೇ ಸೂಚನೆ ನೀಡಿದೆ. ಬೇತ್ರಿ, ಬಲಮುರಿ, ದುಬಾರೆ, ಕೂಡಿಗೆ, ಕುಶಾಲನಗರ, ಸಿದ್ದಾಪುರ, ಕರಡಿಗೋಡು ಭಾಗದಲ್ಲಿ ನದಿ ತುಂಬಿ ಹರಿಯುತ್ತಿದೆ. ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕೊಡಗಿನ ಗಡಿ ಭಾಗ ಕುಟ್ಟ ಮತ್ತು ಕರಿಕೆಯಲ್ಲೂ ಮಳೆ ತೀವ್ರತೆಯನ್ನು ಪಡೆದುಕೊಂಡಿದೆ. ಗ್ರಾಮೀಣ ಭಾಗದಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿದೆ. ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಜಿಲ್ಲೆಯ ಹೆಸರುವಾಸಿ ಪ್ರವಾಸಿತಾಣ ಅಬ್ಬಿಫಾಲ್ಸ್ ಸೇರಿದಂತೆ ಹಲವು ಜಲಪಾತಗಳು ದುಮ್ಮಿಕ್ಕುತ್ತಿದ್ದು, ಸೌಂದರ್ಯ ಇಮ್ಮಡಿಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಜೂ.28 ರ ಬೆಳಿಗ್ಗೆ 8.30 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಹಾಮಳೆ ಅನಾಹುತವನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಮುಂಜಾಗೃತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡಲಾಗಿದೆ.
::: ಮಳೆ ವಿವರ :::
ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 92.22 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 3.91 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 736.67 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 238.53 ಮಿ.ಮೀ ಮಳೆಯಾಗಿತ್ತು.
ಭಾಗಮಂಡಲದಲ್ಲಿ ದಾಖಲೆಯ 212 ಮಿ.ಮೀ. (8 ಇಂಚು), ಮಡಿಕೇರಿ ಹೋಬಳಿ 158.60, ನಾಪೋಕ್ಲು 131.20, ಸಂಪಾಜೆ 138.50, ವಿರಾಜಪೇಟೆ 106, ಅಮ್ಮತ್ತಿ 101, ಹುದಿಕೇರಿ 122 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 160.07 ಮಿ.ಮೀ. ಕಳೆದ ವರ್ಷ ಇದೇ ದಿನ 7.28 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1083.85 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 417.25 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 103.50 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 726.45 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 169.41 ಮಿ.ಮೀ. ಮಳೆಯಾಗಿತ್ತು.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 101.57 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 3.61 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 740.36 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 168.29 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 48.45 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.45 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 565.26 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 182.71 ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 47.50 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.80 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 567.4 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 255 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:- ಶ್ರೀಮಂಗಲ 88.20, ಪೊನ್ನಂಪೇಟೆ 120, ಬಾಳೆಲೆ 76.10, ಸೋಮವಾರಪೇಟೆ ಕಸಬಾ 29.80, ಶನಿವಾರಸಂತೆ 31, ಶಾಂತಳ್ಳಿ 93, ಕೊಡ್ಲಿಪೇಟೆ 40, ಕುಶಾಲನಗರ 31, ಸುಂಟಿಕೊಪ್ಪ 64 ಮಿ.ಮೀ.ಮಳೆಯಾಗಿದೆ.
::: ಹಾರಂಗಿ ಜಲಾಶಯದ ನೀರಿನ ಮಟ್ಟ :::
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2832.65 ಅಡಿಗಳು. ಕಳೆದ ವರ್ಷ ಇದೇ ದಿನ 2819.88 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 27.40 ಮಿ.ಮೀ., ಇಂದಿನ ನೀರಿನ ಒಳಹರಿವು 1425 ಕ್ಯುಸೆಕ್, ಕಳೆದ ವರ್ಷ ಇದೇ ದಿನ 221 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.