ಕುಶಾಲನಗರ ಜು.7 NEWS DESK : ರಾಷ್ಟ್ರೀಯ ಸೇವಾ ಯೋಜನೆ ( NSS ) ಯು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗದಲ್ಲಿ ಪರಿಶ್ರಮದ ಜೀವನದ ಮಹತ್ವ ತಿಳಿಯಪಡಿಸುವುದರೊಂದಿಗೆ ಹೊಸ ಹೊಸ ಅರಿವನ್ನು ಪಡೆಯುತ್ತಾ, ಸೇವಾ ಮನೋಭಾವ ಬೆಳೆಸುತ್ತಾ, ಜಾತಿ ಮತ ಭೇಧವಿಲ್ಲದೆ ಒಂದೇ ಕುಟುಂಬದ ಸದಸ್ಯರಂತೆ ಬಾಳಿ ಬದುಕಲು ಕಲಿಸುವ NSS ಚಟುವಟಿಕೆಗಳು ಜೀವನದ ನೈಜ ಪಾಠ ಕಲಿಸುತ್ತವೆ ಎಂದು ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಹೇಳಿದರು.
ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಕೊಡಗು ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎನ್ನೆಸ್ಸೆಸ್ ಕಾರ್ಯಚಟುವಟಿಕೆಗಳು ಹಾಗೂ ಜೀವನ ಕೌಶಲ್ಯಗಳು ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಸಮುದಾಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ಎನ್ನೆಸ್ಸೆಸ್ ಚಟುವಟಿಕೆಗಳು ಸಹಕಾರಿಯಾಗಿವೆ ಎಂದರು. ದೇಶದಲ್ಲಿ ಮಹಾತ್ಮ ಗಾಂಧಿಯವರ ರಾಮರಾಜ್ಯದ ಕನಸನ್ನು ನನಸು ಮಾಡುವ ದಿಸೆಯಲ್ಲಿ 1969 ರಲ್ಲಿ ಆರಂಭಗೊಂಡ ಎನ್ನೆಸ್ಸೆಸ್ ಸೇವೆಯಲ್ಲಿ ಪ್ರಸ್ತುತ 45 ಲಕ್ಷ ಮಂದಿ ಸ್ವಯಂ ಸೇವಕರು ಸೇವೆ ಸಲ್ಲಿಸುತ್ತಿದ್ದು, ಈ ಸಂಖ್ಯೆಯನ್ನು 1 ಕೋಟಿಯಷ್ಟು ಸ್ವಯಂ ಸೇವಕರನ್ನು ತಲುಪಲು ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಪದವಿ ಪೂರ್ವ ಹಾಗೂ ಪದವಿ ಮಾದರಿಯಲ್ಲಿ ಪ್ರೌಢಶಾಲೆಗಳಲ್ಲೂ ಎನ್ನೆಸ್ಸೆಸ್ ಘಟಕಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಲು ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುತ್ತಿದೆ ಎಂದರು. ಯುವ ಸಮುದಾಯದಲ್ಲಿ ಉತ್ತಮ ವ್ಯಕ್ತಿತ್ವ, ನಾಯಕತ್ವ, ಮೌಲ್ಯಾಧಾರಿತ ಜೀವನ ಕೌಶಲ್ಯಗಳನ್ನು ಬೆಳೆಸುವ ಮೂಲಕ ಅವರನ್ನು ಉತ್ತಮ ಸತ್ಪ್ರಜೆಗಳನ್ನಾಗಿ ರೂಪಿಸಲು ಇದೀಗ ಎನ್ನೆಸ್ಸೆಸ್ ಮೂಲಕ ಜೀವನ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಪ್ರತಾಪ್ ಲಿಂಗಯ್ಯ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜಕ ಡಾ ಎಂ.ಬಿ.ಸುರೇಶ್ ಮಾತನಾಡಿ, ಯುವ ಸಬಲೀಕರಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಯುವ ಸಮುದಾಯದಲ್ಲಿ ಉತ್ತಮ ಜೀವನ ಕೌಶಲ್ಯಗಳನ್ನು ಬೆಳೆಸಲು ತರಬೇತಿ ನೀಡಲಾಗುತ್ತಿದೆ ಎಂದರು. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದಲ್ಲಿ ತಮ್ಮ ಭಾವನೆಗಳಿಗೆ ಪೂರಕವಾಗಿ ಅವರ ಮಾನಸಿಕ ಒತ್ತಡಗಳನ್ನು ನಿವಾರಿಸಿ ಅವರಲ್ಲಿ ಉತ್ತಮ ಜೀವನ ಕೌಶಲ್ಯಗಳನ್ನು ಬೆಳೆಸಲು ಯುವ ಸ್ಪಂದನ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಎನ್ನೆಸ್ಸೆಸ್ ಅಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ಜಿಲ್ಲೆಯ 20 ಸರ್ಕಾರಿ ಪ್ರೌಢಶಾಲೆಗಳಲ್ಲಿ ಇರುವ ಎನ್ನೆಸ್ಸೆಸ್ ಘಟಕಗಳ ವತಿಯಿಂದ ಕೈಗೊಳ್ಳಲಾಗುತ್ತಿರುವ ಕಾರ್ಯಚಟುವಟಿಕೆಗಳು ಹಾಗೂ ಸೇವಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಎನ್ನೆಸ್ಸೆಸ್ ಘಟಕಗಳ ಮೂಲಕ ಸಕಾಲಿಕವಾಗಿ ಹಾಗೂ ವಾರ್ಷಿಕವಾಗಿ ಹಮ್ಮಿಕೊಳ್ಳಬಹುದಾದ ಸಮುದಾಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಪ್ರೌಢಶಾಲಾ ವಿಭಾಗದ ಪ್ರಭಾರ ಉಪ ಪ್ರಾಂಶುಪಾಲ ಎ.ಸಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ವಿರಾಜಪೇಟೆ ತಾಲ್ಲೂಕು ದೈಹಿಕ ಪರಿವೀಕ್ಷಕಿ ಬಿ.ಪಿ.ಗಾಯತ್ರಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಎಸ್.ನಂದೀಶ್, ಸಿ.ಆರ್.ಪಿ.ಕೆ.ಶಾಂತಕುಮಾರ್, ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿಗಳು ಇದ್ದರು. ಶಿಕ್ಷಕಿ ಬಿ.ಬಿ.ಹೇಮಲತಾ ನಿರ್ವಹಿಸಿದರು. ಶಿಕ್ಷಕಿ ಎಂ.ಪಿ.ರಶ್ಮಿ ವಂದಿಸಿದರು. ವಿದ್ಯಾರ್ಥಿನಿ ಪ್ರಗತಿ ಬಡಿಗೇರ್ ಗೀತೆ ಹಾಡಿದರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಯುವ ಸ್ಪಂದನ ಮತ್ತು ಕೌಶಲ್ಯ ಕಾರ್ಯಕ್ರಮದ ಹಿರಿಯ ಪ್ರಾಧ್ಯಾಪಕರೂ ಆದ ಪ್ರಧಾನ ಸಂಶೋಧಕ ಡಾ ಬಿ.ಎಸ್.ಪ್ರದೀಪ್ ಅವರೊಂದಿಗೆ ನಿಮ್ಹಾನ್ಸ್ ಆಸ್ಪತ್ರೆಯ ಸಂಪನ್ಮೂಲ ವ್ಯಕ್ತಿಗಳಾದ ಆನಂದ್ ಮತ್ತು ನಾಗರಾಜ್ ವಿವಿಧ ಮಾಡ್ಯೂಲೋಗಳನ್ನು ಬಳಸಿಕೊಂಡು ವಿವಿಧ ಅಭ್ಯಾಸಾತ್ಮಕ ಚಟುವಟಿಕೆಗಳ ಮೂಲಕ ಭಾವನಾತ್ಮಕ ಸನ್ನಿವೇಶಕ್ಕೆ ಪೂರಕವಾಗಿ ಚೌಕಟ್ಟು ನಿರ್ವಹಣೆ ಹಾಗೂ ಬಾಹ್ಯ ಒತ್ತಡವನ್ನು ನಿವಾರಣೆ ಮಾಡುವ ಕುರಿತು ಮಾಹಿತಿ ನೀಡಿದರು. ಎನ್ನೆಸ್ಸೆಸ್ ಸ್ವಯಂ ಸೇವಕರಿಗೆ ಪ್ರಶಂಸನಾ ಪತ್ತೆ ವಿತರಿಸಲಾಯಿತು.
Breaking News
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*
- *ಕುಶಾಲನಗರ ಗಣಪತಿ ದೇವಾಲಯಕ್ಕೆ ಉದ್ಯಮಿಗಳು ಹಾಗೂ ಟಿಬೆಟಿಯನ್ ಕುಟುಂಬದಿಂದ ಬೆಳ್ಳಿ ಕವಚ ಮತ್ತು ಪೂಜಾ ಸಾಮಾಗ್ರಿ ವಿತರಣೆ*
- *ವಿರಾಜಪೇಟೆ : ಡಿಜಿಟಲ್ ಗ್ರಂಥಾಲಯದ ಮೂಲಕ ಜ್ಞಾನದ ಸಶಕ್ತೀಕರಣ ಉಪನ್ಯಾಸ ಕಾರ್ಯಕ್ರಮ*
- *ಅತಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ : ಶಿಕ್ಷಣ ನೀಡಿದ ಸರ್ಕಾರಿ ಶಾಲೆಗೆ ಆದಾಯದ ಒಂದು ಭಾಗ ಮೀಸಲಿಡಿ : ಹೆಚ್.ಎಲ್.ದಿವಾಕರ್ ಕರೆ*
- *ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ನೂತನ ಪದಾಧಿಕಾರಿಗಳ ನೇಮಕ : ಜಿಲ್ಲಾಧ್ಯಕ್ಷರಾಗಿ ಡಾ.ಯಾಲದಾಳು ಮನೋಜ್ ಬೋಪಯ್ಯ ಆಯ್ಕೆ*
- *ವಾರ ಭವಿಷ್ಯ : ಯಾರಿಗೆ ಈ ವಾರ ಶುಭ… : ನ.18 ರಿಂದ 24ರ ವರೆಗೆ*
- *ಬಿ.ಡಿ.ಮಂಜುನಾಥ್ “ಕೊಡಗು ಸಹಕಾರ ರತ್ನ” ಪ್ರಶಸ್ತಿಗೆ ಭಾಜನ : ನ.20 ರಂದು ಸಹಕಾರ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರದಾನ*
- *ಭಾಗಮಂಡಲದಲ್ಲಿ ಕಾವೇರಿ ಆರತಿ*
- *ಬೊಳ್ಳಮ್ಮಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ*