ಕುಶಾಲನಗರ ಜು.8 NEWS DESK : ಕುಶಾಲನಗರದ ಲಾಡ್ಜೊಂದರಲ್ಲಿ ಹೆಂಗಸರಿಂದ ಮಸಾಜ್ ಮಾಡಿಸಲಾಗುವುದು ಎಂದು ನಂಬಿಸಿ ಆನ್‌ಲೈನ್ ಮೂಲಕ ಗ್ರಾಹಕರಿಂದ ಹಣ ಪಡೆದು ವಂಚಿಸುತ್ತಿದ್ದ ಹಾಸನ ಮೂಲದ 8 ಮಂದಿಯನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಗ್ರಾಮದ ಮಂಜುನಾಥ (29), ಚಿಕ್ಕಸತ್ತಿಗಾಲದ ಸಿ.ಎಸ್.ಸಂದೀಪ್ ಕುಮಾರ್, ಸಿ.ಬಿ.ರಾಕೇಶ್ (24) ಕೆ.ಜಯಲಕ್ಷ್ಮಿ (29), ಬೇಲೂರು ತಾಲೂಕಿನ ರಾಮನಗರ ಗ್ರಾಮದ ಎಸ್. ಸಹನಾ(19), ಪಲ್ಲವಿ(30),ಸಕಲೇಶಪುರ ತಾಲೂಕಿನ ಇರಗಲ್ ಗ್ರಾಮದ ಅಭಿಷೇಕ್ (24) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದ ಪೊಲೀಸರು, ಆರೋಪಿಗಳಿಂದ ಎರಡು ಕಾರು,17ಮೊಬೈಲ್, ತಲಾ ಒಂದು ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ಮತ್ತು 24,800 ರೂ.ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕರೆ ಮಾಡಿದ ವ್ಯಕ್ತಿಗಳ ಊರಿನಲ್ಲಿರುವ ಲಾಡ್ಜ್‌ನ ಹೆಸರು ಹೇಳಿಕೊಂಡು ಹಲವು ಜನರಿಗೆ ವಂಚಿಸಿ 3 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಪಡೆದಿರುವುದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಘಟನೆಯ ವಿವರ: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಚನಹಳ್ಳಿ ನಿವಾಸಿಯಾದ ಮಂಜು ಎಂಬವರು ಜೂ.29ರಂದು ಲೊಕಾಂಟೋ ಆ್ಯಪ್’ನಲ್ಲಿ ಕಂಡು ಬಂದ ಜಾಹೀರಾತಿನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಒಬ್ಬ ವ್ಯಕ್ತಿ ಮಾತನಾಡಿ, ನಾನು ಕುಶಾಲನಗರದ ಲಾಡ್ಜ್ ಮ್ಯಾನೇಜರ್ ಎಂಬುದಾಗಿ ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ಲಾಡ್ಜ್‌ನಲ್ಲಿ ಹೆಂಗಸರಿಂದ ಸೆಕ್ಸ್/ ಮಸಾಜ್ ಮಾಡಿಸಲಾಗುವುದು ಹಾಗೂ ಆನ್‌ಲೈನ್ ಮೂಲಕ ಮುಂಗಡವಾಗಿ ಹಣ ಕಳುಹಿಸಿದರೆ ಈಗಲೇ ಹೆಂಗಸರ ಏರ್ಪಾಡು ಮಾಡಲಾಗುವುದು ಎಂದು ತಿಳಿಸಿ ಮಂಜು ಅವರ ವಾಟ್ಸ್ ಆ್ಯಪ್’ಗೆ ಕೆಲವು ಹೆಂಗಸರ ಭಾವಚಿತ್ರಗಳನ್ನು ಕಳುಹಿಸಿ ಕೊಟ್ಟು ಒಂದು ಗಂಟೆಗೆ ಮತ್ತು ಒಂದು ರಾತ್ರಿಗೆ ನೀಡಬೇಕಾದ ಮೊತ್ತವನ್ನು ತಿಳಿಸಿದ್ದಾನೆ. ಅದರಂತೆ ಮಂಜು ಅವರು ಒಂದೆ ಗಂಟೆಗೆ ತಗಲುವ ಮೊತ್ತವನ್ನು ಗೂಗಲ್ ಪೇ ಮುಖಾಂತರ ಕಳುಹಿಸಿದ್ದು, ಅತ್ತ ಕಡೆಯಿಂದ ಕರೆ ಮಾಡಿದ ಅದೇ ವ್ಯಕ್ತಿ, ಕುಶಾಲನಗರದ ಲಾಡ್ಜ್ ಒಂದರ ಬಳಿ ಬಂದು ಲೊಕೇಷನ್ ಕಳುಹಿಸುವಂತೆ ಮತ್ತು ಯಾವ ಬಣ್ಣದ ಬಟ್ಟೆ ಹಾಕಿದ್ದೀರಾ ಎಂದು ತಿಳಿಸುವಂತೆ ಹೇಳಿದ್ದಾನೆ.
ಆ ವ್ಯಕ್ತಿ ಹೇಳಿದಂತೆ ಲಾಡ್ಜ್‌ನ ಬಳಿ ಹೋಗಿ ಕರೆ ಮಾಡಿದಾಗ ಪುನಃ ಆನ್‌ಲೈನ್‌ನಲ್ಲಿ ಹಣ ಹಾಕಬೇಕು ಎಂದು ಹೇಳಿದ್ದರಿಂದ ಅನುಮಾನಗೊಂಡ ಮಂಜು, ಲಾಡ್ಜ್’ನ ರಿಸೆಪ್ಷನ್’ಗೆ ತೆರಳಿ ಮೇಲಿನ ವಿಚಾರ ತಿಳಿಸಿದ್ದಾರೆ. ಆದರೆ ಆ ತರಹದ ಯಾವುದೇ ರೀತಿಯ ವ್ಯವಹಾರ ನಮ್ಮಲ್ಲಿ ಇರುವುದಿಲ್ಲ ಹಾಗೂ ಇದೇ ವಿಚಾರ ಹೇಳಿಕೊಂಡು 3-4 ಜನ ಬಂದಿದ್ದು, ನಿಮಗೆ ಯಾರೋ ಮೋಸ ಮಾಡಿದ್ದಾರೆ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ರಿಸೆಪ್ಷನ್’ನಲ್ಲಿದ್ದವರು ಸಲಹೆ ಮಾಡಿದ್ದಾರೆ. ಆದರಂತೆ ಅಪರಿಚಿತ ವ್ಯಕ್ತಿಗಳು ಹೋಟೇಲ್ ಮತ್ತು ಲಾಡ್ಜ್ ಮ್ಯಾನೇಜರ್ ಎಂದು ಹೇಳಿಕೊಂಡು ಲಾಡ್ಜ್‌ನಲ್ಲಿ ಹೆಂಗಸರಿಂದ ಸೆಕ್ಸ್ ಮಸಾಜ್ ಮಾಡಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚನೆ ಮಾಡಿದ್ದು, ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಜು ಅವರು ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಡಿವೈ ಎಸ್ ಪಿ ಆರ್.ವಿ. ಗಂಗಾಧರಪ್ಪ, ವೃತ್ತ ನಿರೀಕ್ಷಕ ಪ್ರಕಾಶ್.ಬಿ.ಜಿ, ಪಿಎಸ್ ಐಗಳಾದ ಚಂದ್ರಶೇಖರ್.ಹೆಚ್.ಎ, ಮತ್ತು ಹೆಚ್.ಟಿ.ಗೀತಾ, ಕುಶಾಲನಗರ ನಗರ ಪೊಲೀಸ್ ಠಾಣೆ ಹಾಗೂ ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಕಲೆಹಾಕಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಜು.6ರಂದು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ರಾಮರಾಜನ್ ಮಾಹಿತಿ ನೀಡಿದರು. ಅಲ್ಲದೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿದರು. ಅಂತರ್ಜಾಲದಲ್ಲಿ ಮಹಿಳೆಯರಿಂದ ಸೆಕ್ಸ್/ಮಸಾಜ್/ವೇಶ್ಯಾವಾಟಿಕೆ ಸೇವೆಗಳು ಲಭ್ಯ ಎಂಬುದಾಗಿ ಮೊಬೈಲ್ ಸಂಖ್ಯೆಯನ್ನು ನೀಡಿ ಕರೆ ಮಾಡುವಂತೆ ಸೃಷ್ಟಿಸಿರುವ ವೆಬ್ ಸೈಟ್‌ಗಳನ್ನು ಬಳಸಿ ವಂಚನೆಗೆ ಒಳಗಾಗದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ಹೋಂ ಸ್ಟೇ ರೆಸಾರ್ಟ್/ಲಾಡ್ಜ್ ಗಳಲ್ಲಿ ಸಮಾಜದ ಸ್ವಾಸ್ಥ್ಯ ಹದಗೆಡುವ ರೀತಿಯ ಯಾವುದೇ ರೀತಿಯ ಆನೈತಿಕ ಅಕ್ರಮ ಚಟುವಟಿಕೆಗಳು ನಡೆಸುತ್ತಿರುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಅವರು ಕೋರಿದರು. ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್.ಸುಂದರ್ ರಾಜ್, ವೃತ್ತ ನಿರೀಕ್ಷಕ ಪ್ರಕಾಶ್, ಪಿಎಸ್ಐಗಳಾದ ಪ್ರಕಾಶ್, ಗೀತಾ ಹಾಜರಿದ್ದರು.