ಮಡಿಕೇರಿ ಜು.8 NEWS DESK : ವಿದ್ಯಾರ್ಥಿಗಳು ಜೀವನದಲ್ಲಿ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿರಬೇಕೆಂದು ಸಾಹಿತಿ ರಜಿತ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಣಿಕೊಪ್ಪ ಸಂತ ಥಾಮಸ್ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಜಿತ ಕಾರ್ಯಪ್ಪ ಅವರು, ಪಾಲಕರು, ಗುರುಗಳು, ಹಿರಿಯರನ್ನು ಗೌರವಿಸುವ ಮಹತ್ವ ಸಾರಿದರು. ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಮತ್ತು ಅವರನ್ನು ರೂಪಿಸಿದ ಶಾಲೆಯನ್ನು ನೆನಪಿಸಿಕೊಳ್ಳಬೇಕು ಮತ್ತು ಉತ್ತಮ ನಾಗರಿಕರಾಗಲು ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಅನುವು ಮಾಡಿಕೊಡುವ ಗುಣಾತ್ಮಕ ಶಿಕ್ಷಣಕ್ಕಾಗಿ ಶ್ರಮಿಸಬೇಕು ಎಂದರು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು.
ವಿದ್ಯೆ ಎಂಬುವುದು ಕದಿಯಲಾಗದ ಸಂಪತ್ತು, ವಿದ್ಯಾವಂತರು ದೇಶಕ್ಕೆ ಆಸ್ತಿಯಾಗಬೇಕು. ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿದರೆ ಮಾತ್ರ ಯುವ ಸಮಾಜದ ಸದ್ಬಳಕೆಯಾಗುವುದು ಹಾಗೂ ಓದುವಿಕೆಯಲ್ಲಿ ಹೆಚ್ಚು ತೊಡಗಿಸಿಕ್ಕೊಳ್ಳಬೇಕು ಎಂದರು.
ಶಾಲೆಯ ಪ್ರಾಂಶುಪಾಲರಾದ ಫಾ. ಆಂಟೋಣಿ ಪಯ್ಯಪ್ಪಳ್ಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿ ಶಕ್ತಿ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು. ಸಮಾಜಕ್ಕೆ ಸಹಕಾರಿಯಾಗುವಂತಹ ಶಿಕ್ಷಣವು, ವಿದ್ಯಾರ್ಥಿಗಳಿಗೆ ಸಿಗಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಬೇಕು. ಜೀವನದಲ್ಲಿ ವಿದ್ಯಾರ್ಥಿಗಳು ಕಲಿಕೆಯ ಗುಣಮಟ್ಟವನ್ನು ಏರಿಸಿ ಏಕತೆಯಿಂದ ಒಗ್ಗೂಡಿಕೊಂಡು, ನಿರಂತರ ಪರಿಶ್ರಮ, ಸಾಧನೆಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ.ಜೀವನದಲ್ಲಿ ನಾಯಕತ್ವದ ಗುಣವನ್ನು ಬೆಳೆಸಿಕೊಂಡಲ್ಲಿ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳಬಹುದು ಎಂದರು.
ಶಾಲಾ ನಾಯಕರಾಗಿ ಮುಫಿದ್ ಎಂ.ಆರ್. ನುಹಾ ಫಾತೀಮ, ಕ್ರೀಡಾ ನಾಯಕರಾಗಿ ಬಿಲಾಲ್ ಬಿ.ಎಸ್., ಸಿಯೋನ ಸುನಿಲ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ನಾಯಕರಾಗಿ ನಿಷಾದ್ ಪಿ.ಬಿ., ಹೃಷಿಕಾ ಬಿ.ಎಸ್. ಆಯ್ಕೆಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಇದೇ ಸಂದರ್ಭ ಸಾಹಿತಿಗಳು, ಸಮಾಜ ಸೇವಕರಾದ ರಜಿತ ಕಾರ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಅಧ್ಯಕ್ಷರಾದ ಫಾ. ಕೆ.ಎಫ್ ಥಾಮಸ್ ಕೆಳಪ್ಪುರ ಅವರು ಎಲ್‍ಕೆ.ಜಿ ಯಿಂದ 10 ನೇ ತರಗತಿವರೆಗಿನ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಮತ್ತು ಶಾಲೆಗೆ ನೂತನವಾಗಿ ಕರ್ತವ್ಯ ನಿರ್ವಹಿಸಲು ಆಗಮಿಸಿದ ಶಿಕ್ಷಕರನ್ನು ಹೂಗುಚ್ಚ ನೀಡುವುದರ ಮೂಲಕ ಸ್ವಾಗತಿಸಲಾಯಿತು.
ಕಾರ್ಯಕ್ರಮದ ಮಾರ್ಗದರ್ಶಕರಾಗಿ ಕುಮುದ, ಕ್ರೀಡಾ ಶಿಕ್ಷಕರಾದ ಶಯನ್ ಮತ್ತು ವಿನಿತಾ ಜೆನಿಫರ್ ಕಾರ್ಯನಿರ್ವಹಿಸಿದರು. ಶಾಲೆಯ ಭೋದಕ ಮತ್ತು ಭೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂಧರ್ಭ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.