ಬೆಂಗಳೂರು ಜು.11 NEWS DESK : ವಿಶ್ವದ ಅಗ್ರ ಉತ್ಪಾದಕ ವಿಯೆಟ್ನಾಂನಿಂದ ಸಾಗಣೆಯಲ್ಲಿನ ನಿಧಾನಗತಿಯಿಂದ ಜಾಗತಿಕ ಮಾರುಕಟ್ಟೆ ಬಿಗಿಯಾಗಿ ರೋಬಸ್ಟಾ ಕಾಫಿ ಬೆಲೆಗಳು ಮಂಗಳವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿ ಹೊಸ ದಾಖಲೆಯೇ ನಿರ್ಮಾಣವಾಗಿದೆ. ಅರೇಬಿಕಾ ಮತ್ತು ರೊಬಸ್ಟಾ ಪಾರ್ಚ್‌ಮೆಂಟ್ ಕಾಫಿಗಳೆರಡೂ ಚೀಲಕ್ಕೆ 300 ರಿಂದ 500 ರೂಪಾಯಿಗಳವರೆಗೆ ಏರಿಕೆ ದಾಖಲಿಸಿವೆ.
ಬುಧವಾರ ದೇಶೀ ಮಾರುಕಟ್ಟೆಯಲ್ಲಿ ಅರೆಬಿಕಾ ಪಾರ್ಚ್‌ಮೆಂಟ್ ದರ 50 ಕೆಜಿಗೆ ಚೀಲವೊಂದಕ್ಕೆ 16,4೦೦ ರೂಪಾಯಿಗಳಿಗೂ ರೊಬಸ್ಟಾ ಪಾರ್ಚ್‌ಮೆಂಟ್ ಬೆಲೆ 17,500 ರೂಪಾಯಿಗಳವರೆಗೂ ಏರಿಕೆ ದಾಖಲಿಸಿತು. ರೊಬಸ್ಟಾ ಚೆರಿ ದರ ಚೀಲಕ್ಕೆ 10 ಸಾವಿರ ತಲುಪಿದ್ದು ಅರೇಬಿಕಾ ಚೆರಿ ೯ ಸಾವಿರ ತಲುಪಿದೆ. ಮೂಡಿಗೆರೆಯ ಮುದ್ರೆಮನೆ ಕಾಫಿ ಸಂಸ್ಥೆಯ ಖರೀದಿ ದರದ ಪ್ರಕಾರ ಅರೇಬಿಕಾ ಪಾರ್ಚ್‌ಮೆಂಟ್ ದರ ಚೀಲಕ್ಕೆ 18 ಸಾವಿರ ಮತ್ತು ರೊಬಸ್ಟಾ ಪಾರ್ಚ್ ಮೆಂಟ್ ದರ ಚೀಲಕ್ಕೆ 19,200 ರೂಪಾಯಿ ಇದ್ದು ಇದ್ದು ಅರೆಬಿಕಾ ಚೆರಿ ಕಿಲೋಗೆ 355 ರಂತೆ ಮತ್ತು ರೊಬಸ್ಟಾ ಚೆರಿ ದರ ಕಿಲೋಗೆ 405 ರೂಪಾಯಿ ಇದೆ ಎಂದು ತಿಳಿಸಿದರು. ಆದರೆ ಚೆರಿ ಕಾಫಿ ಸಂಪೂರ್ಣ ಔಟರ್ನ್ ಮೇಲೆ ಅವಲಂಬಿತವಾಗಿದೆ ಎಂದೂ ಸ್ಪಷ್ಟಪಡಿಸಿದರು. ಓರ್ವ ವರ್ತಕರ ಈ ಹೆಚ್ಚಿನ ದರದ ವಾಟ್ಸ್ ಅಪ್ ಸಂದೇಶ ಬುಧವಾರ ಭಾರೀ ಸಂಖ್ಯೆಯಲ್ಲಿ ಹರಿದಾಡಿ ಕೊಡಗಿನಾದ್ಯಂತ ವೈರಲ್ ಆಗಿತ್ತು.
ಆದರೆ ಮಹದಚ್ಚರಿಯ ಸಂಗತಿಯೆಂದರೆ ಕೊಡಗಿನಲ್ಲಿ ಯಾವುದೇ ಕಾಫಿ ವರ್ತಕರೂ ಈ ದರಕ್ಕೆ ಕಾಫಿ ಖರೀದಿಸುತ್ತಿಲ್ಲ. ಮಡಿಕೇರಿ, ಕುಶಾಲನಗರ ಮತ್ತು ಸೋಮವಾರಪೇಟೆಯ ವರ್ತಕರು ರೊಬಸ್ಟಾ ಪಾರ್ಚ್‌ಮೆಂಟ್ ಗೆ 16,800 ರಿಂದ 17,300 ರ ವರೆಗೆ ಹಾಗೂ ಅರೇಬಿಕಾ ಪಾರ್ಚ್‌ಮೆಂಟ್ ಕಾಫಿ ಗೆ 15,800 ರಿಂದ 16,200 ರ ವರೆಗೆ ಖರೀದಿಸುತಿದ್ದಾರೆ. ಕಾಫಿ ದರ ಕುರಿತು ಚಿಕ್ಕಮಗಳೂರಿನ ಇತರ ವರ್ತಕರಲ್ಲಿ ವಿಚಾರಿಸಿದಾಗ ಅಲ್ಲಿಯೂ ಕೂಡ ಉತ್ತಮ ರೊಬಸ್ಟಾ ಪಾರ್ಚ್‌ಮೆಂಟ್ ಕಾಫಿಗೆ 18 ಸಾವಿರ ರೂಪಾಯಿವರೆಗೆ ಮತ್ತು ಅರೇಬಿಕ ಪಾರ್ಚ್‌ಮೆಂಟ್ ಕಾಫಿಗೆ 16,500 ದರ ನೀಡುವುದಾಗಿ ತಿಳಿಸಿದರು. ಮತ್ತೋರ್ವ ವರ್ತಕರು ದರ ಹೆಚ್ಚು ನೀಡುವ ಅಮಿಷವೊಡ್ಡುವವರ ಬಗ್ಗೆ ಜಾಗ್ರತೆ ಆಗಿರಬೇಕು. ಕಾಫಿ ಪಡೆದು ಹಣ ನೀಡಲು ಸತಾಯಿಸುತ್ತಾರೆ ಅಥವಾ ಕಾಫಿ ಖರೀದಿಸುವುದಿಲ್ಲ ಎಂದು ಹೇಳಿದರು.
ಆದರೆ ಅಂತರ್ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ ಲಂಡನ್ ಕಾಫಿ ಮಾರುಕಟ್ಟೆಯಲ್ಲಿ ಕಾಫಿ ದರ ಮಂಗಳವಾರ ಸರ್ವಕಾಲಿಕ ಏರಿಕೆ ದಾಖಲಿಸಿದೆ. ಈ ವರ್ಷ ರೋಬಸ್ಟಾ ಕಾಫಿ ಬೆಲೆ 63% ಏರಿಕೆಯಾಗಿದೆ, ಲಂಡನ್ ಮೂಲದ ಐಸಿಇ ಫ್ಯೂಚರ್ಸ್ ಯುರೋಪ್ ಮಾರುಕಟ್ಟೆಯಲ್ಲಿ ಮಂಗಳವಾರ ಮೆಟ್ರಿಕ್ ಟನ್‌ಗೆ $4,667 ತಲುಪಿದೆ.
ವಿಯೆಟ್ನಾಂನಂತಹ ಜಾಗತಿಕ ಉತ್ಪಾದಕರು ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಸರಬರಾಜಿನ ವೇಗವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾರಣ ಮಾರುಕಟ್ಟೆಯು ಸುಮಾರು 18 ತಿಂಗಳುಗಳಿಂದ ಏರುತ್ತಿದೆ. 2023 ರಲ್ಲಿ ಕಾಫಿ ಬೆಲೆಗಳು 58% ರಷ್ಟು ಏರಿದವು. ರೋಬಸ್ಟಾವನ್ನು ವಿದೇಶಗಳಲ್ಲಿ ಸಾಮಾನ್ಯವಾಗಿ ಇನ್ಸ್‌ಟಂಟ್ ಕಾಫಿ ಮಾಡಲು ಬಳಸಲಾಗುತ್ತದೆ ̤
ಜೂನ್‌ನಲ್ಲಿ ವಿಯೆಟ್ನಾಂನ ಕಾಫಿ ರಫ್ತು ಕೇವಲ 70,202 ಟನ್‌ಗಳಾಗಿದ್ದು, ಈ ವರ್ಷದ ಮೊದಲಾರ್ಧದಲ್ಲಿ ಒಟ್ಟು 8,93,820 ಟನ್‌ಗಳಷ್ಟು ರಫ್ತಾಗಿದೆ. ಇದು ಹಿಂದಿನ ವರ್ಷಕ್ಕಿಂತ 11.4% ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. “ಜೂನ್ ತಿಂಗಳಲ್ಲಿ ವಿಯೆಟ್ನಾಂನ ಈ ಕಡಿಮೆ ರಫ್ತು ಕಾರ್ಯಕ್ಷಮತೆಯು ಈ ಅತಿದೊಡ್ಡ ರೋಬಸ್ಟಾ-ಉತ್ಪಾದಿಸುವ ರಾಷ್ಟ್ರದೊಳಗಿನ ಬಿಗಿಯಾದ ಆಂತರಿಕ ಮಾರುಕಟ್ಟೆ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತ್ತದೆ” ಎಂದು ಅಲ್ಲಿನ ಕಾಫಿ ಉದ್ಯಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಯೆಟ್ನಾಂನಲ್ಲಿನ ಕಾಫಿ ಉತ್ಪಾದನೆಯು ಈ ಶತಮಾನದ ಮೊದಲ ಎರಡು ದಶಕಗಳಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಅಮೆರಿಕಾದ ಕೃಷಿ ಇಲಾಖೆಯ ಮಾಹಿತಿ ಪ್ರಕಾರ ವಿಯಟ್ನಾಂ 2021-22 ರಲ್ಲಿ 31.58 ಮಿಲಿಯನ್ 60-ಕೆಜಿ ಚೀಲ ಕಾಫಿ ಉತ್ಪಾದಿಸಿತ್ತು.
ಆದರೆ ಕಳೆದ ಎರಡು ವರ್ಷಗಳಿಂದ ಕಾಫಿ ಉತ್ಪಾದನೆ 29 ಮಿಲಿಯನ್ ಚೀಲಗಳಿಗಿಂತ ಕಡಿಮೆ ಆಗಿದೆ. ಹವಾಮಾನ ವೈಪರೀತ್ಯದಿಂದಾಗಿ 2024-25 ರಲ್ಲಿ ಉತ್ಪಾದನೆ ಮತ್ತಷ್ಟು ಕುಸಿಯಲಿದೆ. ವಿಯೆಟ್ನಾಂ ಕಾಫಿ ಬೆಳೆಗಾರರು ಈ ವರ್ಷ ಸುಮಾರು ಒಂದು ದಶಕದಲ್ಲೇ ಅತ್ಯಂತ ಭೀಕರ ಬರಗಾಲಕ್ಕೆ ತುತ್ತಾಗಿದ್ದಾರೆ. ಜಾಗತಿಕ ಕಾಫಿ ಉತ್ಪಾದನೆಯಲ್ಲಿ ನಂಬರ್ ವನ್ ಸ್ತಾನದಲ್ಲಿರುವ ಬ್ರೆಜಿಲ್ ನಲ್ಲಿ ರೊಬಸ್ಟಾ ಕಾಫಿ ಉತ್ಪಾದನೆ 21 ಮಿಲಿಯನ್ ಗೆ ಕುಸಿದಿದ್ದು ಮುಂದಿನ ಎರಡು ವರ್ಷಗಳ ನಂತರವಷ್ಟೆ ಉತ್ಪಾದನೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
ವರದಿ : ಕೋವರ್ ಕೊಲ್ಲಿ ಇಂದ್ರೇಶ್