ನಾಪೋಕ್ಲು ಜು.12 NEWS DESK : ನಾಪೋಕ್ಲು- ವಿರಾಜಪೇಟೆ ಮುಖ್ಯರಸ್ತೆಯ ಹಳೆ ತಾಲ್ಲೂಕು ಬಳಿ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಪಾದಾಚಾರಿಗಳು ಹಾಗೂ ವಾಹನ ಚಾಲಕರು ಪರದಾಡುವಂತಗಿದೆ.
ಪಟ್ಟಣಕ್ಕೆ ಸಮೀಪದ ಹಳೆ ತಾಲೂಕು ಬಳಿಯ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಪಕ್ಕದ ರಸ್ತೆಯಲ್ಲಿ ಹೊಂಡವಾಗಿದ್ದು, ವಾಹನಗಳು ರಸ್ತೆಯ ಅವ್ಯವಸ್ಥೆಯಿಂದ ಒಂದು ಪಾಶ್ವದಲ್ಲಿ ಚಲಿಸಲಾರದೆ ಮತ್ತೊಂದು ಕಡೆಯಲ್ಲಿ ಚಲಿಸುತ್ತಿದ್ದು, ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಗಳು ಇಲ್ಲದೆ ರಸ್ತೆ ಗುಂಡಿಳಾಗಿದ್ದು ಕೆಸರು ನೀರು ತುಂಬಿಕೊಂಡಿದೆ. ಸಂತೆಯ ದಿನವಾದ ಸೋಮವಾರ ವಾಹನಗಳ ಸಂಖ್ಯೆ ಹೆಚ್ಚಿದ್ದು ಗುಂಡಿ ತಪ್ಪಿಸಲು ಹೋಗಿ ವಾಹನ ಚಾಲಕರು ಅಪಘಾತ ಸಂಭವಿಸಿರುವ ಘಟನೆಯೂ ನಡೆದಿದೆ. ಜನಪ್ರತಿನಿಧಿಗಳು ತಕ್ಷಣವೇ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿದ್ದು, ಚರಂಡಿ ಅವಸ್ಥೆ ಇಲ್ಲದೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕೆಲವು ದಿನಗಳಿಂದ ರಸ್ತೆ ಗುಂಡಿಗಾಗಿ ತೀವ್ರ ಸಮಸ್ಯೆ ಎದುರಾಗಿ ಅಪಘಾತಗಳಿಗೆ ಕಾರಣವಾಗುತಿದ್ದು ಸಂಬಂಧಪಟ್ಟವರು ತಕ್ಷಣವೇ ಗುಂಡಿಗಳನ್ನು ಮುಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. :: ಸಿ.ಎಸ್ ಸುರೇಶ್ , ನೇತಾಜಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಬಲ್ಲಮಾವಟ್ಟಿ
ಎದುರಿನಿಂದ ಬರುವ ವಾಹನಗಳಿಗೆ ಸ್ಥಳಾವಕಾಶ ಕೊಡಲು ಆಗುತ್ತಿಲ್ಲ. ರಸ್ತೆ ಹೊಂಡ ತೀವ್ರ ಸಮಸ್ಯೆ ತಂದಿದೆ. ಕೂಡಲೇ ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಬಸ್ ಚಾಲಕ ಶಂಭು ಅಯ್ಯಣ್ಣ ಒತ್ತಾಯಿಸಿದ್ದಾರೆ.
ಕಳೆದ ಬಾರಿಯೂ ಈ ರೀತಿಯ ಸಮಸ್ಯೆ ಉಂಟಾಗಿತ್ತು .ರಸ್ತೆ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದರು. ಚಾಲಕರಿಗೆ ಇತರ ವಾಹನಗಳ ಚಾಲಕರಿಗೆ ಸಮಸ್ಯೆ ಆಗುತ್ತಿದೆ. ಆದಷ್ಟು ಬೇಗ ರಸ್ತೆ ದುರಸ್ತಿ ಪಡಿಸಿದರೆ ಅನುಕುಲವಾಗಲಿದೆ :: ಬದಂಚೆಟ್ಟಿರ ವಿನೋದ್ ತಿಮ್ಮಯ್ಯ, ನೆಲಜಿ
ರಸ್ತೆ ಗುಂಡಿ ಬಿದ್ದು ವಾಹನಗಳು ಒಂದೇ ಬದಿಯಲ್ಲಿ ಸಂಚರಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷವೂ ಇದೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ದುಸ್ಥಿತಿಯಿಂದಾಗಿ ಇಲ್ಲಿ ಸಣ್ಣಪುಟ್ಟ ಅಪಘಾತಗಳಾಗಿದ್ದು ಹೆಚ್ಚಿನ ಅನಾಹುತ ಆಗುವ ಮೊದಲು ಸಂಬಂಧಪಟ್ಟವರು ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು :: ಸಿ.ಹೆಚ್ .ಮೈದು, ಆಟೋ ಚಾಲಕ, ಎಮ್ಮೆಮಾಡು
ವರದಿ : ದುಗ್ಗಳ ಸದಾನಂದ