ಮಡಿಕೇರಿ ಜು.13 NEWS DESK : ಮಡಿಕೇರಿ ನಗರ ಸಂಚಾರಿ ಪೊಲೀಸ್ ಅಧಿಕಾರಿಗಳು ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧೆಡೆ ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಆದರೆ ಇದು ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ನಗರಸಭೆಯ ಮಾಜಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಕೆ.ಯು.ಅಬ್ದುಲ್ ರಜಾಕ್ ಮನವಿ ಮಾಡಿದ್ದಾರೆ.
ಮಡಿಕೇರಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನದಟ್ಟಣೆ ಅಧಿಕವಾಗುತ್ತಿದ್ದು, ಪಾರ್ಕಿಂಗ್ ವ್ಯವಸ್ಥೆ ಹದಗೆಡುತ್ತಿದೆ. ಮಾರುಕಟ್ಟೆ, ರಾಜಾಸೀಟ್, ಕಾಲೇಜು ರಸ್ತೆ ಮತ್ತು ಕಾವೇರಿ ಹಾಲ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಇಲ್ಲದಾಗಿದೆ. ಮಾರುಕಟ್ಟೆ ಭಾಗದಲ್ಲಿ ಪ್ರತಿ ಶುಕ್ರವಾರ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ವಾಹನದಟ್ಟಣೆ ಉಂಟಾಗಿ ಜನ ಕಷ್ಟ ಪಡುವಂತ್ತಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆ ನಗರ ಸಂಚಾರಿ ಪೊಲೀಸ್ ಅಧಿಕಾರಿಗಳು ಈ ಶುಕ್ರವಾರ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸಿದ್ದರು.
ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲುಗಡೆಗೊಂಡಿದ್ದ ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆಗೊಳಿಸಲು ಪೊಲೀಸರು ಕ್ರಮ ಕೈಗೊಂಡ ಪರಿಣಾಮ ಮಾರುಕಟ್ಟೆ ಆವರಣ ಜನ ಸಂಚಾರಕ್ಕೆ ಸುಗಮವಾಗಿತ್ತು. ಇದು ಶುಕ್ರವಾರಕ್ಕೆ ಮಾತ್ರ ಸೀಮಿತವಾಗಬಾರದು. ಇದೇ ರೀತಿಯ ಕ್ರಮವನ್ನು ನಗರದ ಇತರ ಭಾಗಗಳಲ್ಲೂ ಕೈಗೊಳ್ಳಬೇಕು ಎಂದು ಕೆ.ಯು.ಅಬ್ದುಲ್ ರಜಾಕ್ ತಿಳಿಸಿದ್ದಾರೆ.
ವಾಹನ ಚಾಲಕರು ಕೂಡ ಪೊಲೀಸರ ಪ್ರಯತ್ನಕ್ಕೆ ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಬಾರದು ಎಂದು ಅವರು ಕೋರಿದ್ದಾರೆ.