ಮಡಿಕೇರಿ ಜು.15 NEWS DESK : ವಿರಾಜಪೇಟೆ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಐವರು ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ತಮ್ಮ ತಂದೆ ದಿವಂಗತ ಎ.ಕೆ.ಸುಬ್ಬಯ್ಯ ಹಾಗೂ ತಾಯಿ ದಿವಂಗತ ಎ.ಎಸ್ ಪೊನ್ನಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ಕ್ರೀಡಾ ಗ್ರಾಮದಲ್ಲಿ ಮೈದಾನದ ಕೊರತೆ” ವರದಿಗೆ ಎ.ಎನ್.ವಾಸು ಪಡೆದುಕೊಂಡಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್.ಸವಿತಾ ರೈ ಅವರು ತಮ್ಮ ತಂದೆ ಕೃಷಿಕರಾಗಿದ್ದ ದಿವಂಗತ ಬಿ.ಎಸ್.ರಂಗನಾಥ ರೈ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ “ಮಿಶ್ರ ಕೃಷಿಯಲ್ಲಿ ದಂಪತಿ ಸಾಧನೆ” ವರದಿಗೆ ಪಿ.ವಿ.ಅಂತೋಣಿ ಪಡೆದುಕೊಂಡಿದ್ದಾರೆ.
ಸಿದ್ದಾಪುರದ ಸಮಾಜ ಸೇವಕರಾದ ಕೆ.ಯು.ಅಬ್ದುಲ್ ಮಜೀದ್ ಅವರು ತಮ್ಮ ತಂದೆ ದಿವಂಗತ ಉಸ್ಮಾನ್ ಹಾಜಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ಕೊಡಗು ಚಾನಲ್ ವಾಹಿನಿಯಲ್ಲಿ ಪ್ರಕಟವಾದ “ಬಾವಿಗೆ ಬಿದ್ದು ಅಸುನೀಗಿದ ಕರು: ತಾಯಿ ಹಸುವಿನ ರೋದನ” ವರದಿಗೆ ರವಿ ಕುಮಾರ್ ಪಡೆದುಕೊಂಡಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಕೋಲತಂಡ ರಘು ಮಾಚಯ್ಯ ಅವರು ತಮ್ಮ ತಂದೆ ದಿವಂಗತ ಕೋಲತಂಡ ಉತ್ತಪ್ಪ ಹಾಗೂ ತಾಯಿ ಕಾಮವ್ವ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಮತ್ತು ವನ್ಯಜೀವಿ ವರದಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ “ವನ್ಯ ಜೀವಿ – ಮಾನವ ಸಂಘರ್ಷಕ್ಕೆ ಕೊನೆ ಎಂದು?” ವರದಿಗೆ ಆರ್.ಸುಬ್ರಮಣಿ ಪಡೆದುಕೊಂಡಿದ್ದಾರೆ.
ವಿರಾಜಪೇಟೆಯ ಪ್ರಗತಿ ಶಾಲೆಯ ಮುಖ್ಯಸ್ಥ ಮಾದಂಡ ತಿಮ್ಮಯ್ಯ ಅವರು ತಮ್ಮ ತಾಯಿ ದಿವಂಗತ ತುಂಗಾ ಪೂವಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯತ್ತಮ ಶೈಕ್ಷಣಿಕ ವರದಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ “8 ಶಾಲೆಗಳಲ್ಲಿ ಏಕೋಪಾಧ್ಯಾಯರು! ” ವರದಿಗೆ ಬಡಕಡ ರಜಿತಾ ಕಾರ್ಯಪ್ಪ ಪಡೆದುಕೊಂಡಿದ್ದಾರೆ.
ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ ಅವರ ಅಧ್ಯಕ್ಷತೆಯಲ್ಲಿ ಜುಲೈ 17 ರಂದು ನಡೆಯುವ ಸಂಘದ ವಾರ್ಷಿಕ ಮಹಾಸಭೆಯ ದಿನದಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು, ಪ್ರಶಸ್ತಿ ಪಡೆದ ಎಲ್ಲಾ ಪತ್ರಕರ್ತ ಮಿತ್ರರಿಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.