ಮಡಿಕೇರಿ ಜು.18 NEWS DESK : ಮಡಿಕೇರಿ ಕೊಡವ ಸಮಾಜವು ಕೊಡವ ಜನಾಂಗದ ಮೊತ್ತಮೊದಲ ಸಮಾಜವಾಗಿದ್ದು, ದಾನಿಗಳ ಸಹಕಾರದಿಂದ ಪುನರ್ ನವೀಕರಣಗೊಳ್ಳುವ ಮೂಲಕ ಅಭಿವೃದ್ಧಿಯತ್ತ ಸಾಗುತಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಯ ಬೇಕೆಂದರೆ ಎಲ್ಲರ ಸಹಕಾರ ಅಗತ್ಯ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಹೇಳಿದರು.
ಮಡಿಕೇರಿ ಕೊಡವ ಸಮಾಜದ ವಾರ್ಷಿಕ ಮಹಾಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಡಿಕೇರಿಯಲ್ಲಿ ಕೊಡವ ಸಂಘವಾಗಿ ಪ್ರಾರಂಭಗೊಂಡು ನಂತರದಲ್ಲಿ ಕೊಡವ ಸಮಾಜವಾಗಿ ರೂಪುಗೊಂಡಿತು. ಆಡಳಿತ ಮಂಡಳಿಯು ಹಲವು ಅಭಿವೃದ್ಧಿ ಕಾರ್ಯವನ್ನು ಮಾಡಿದೆ. ಸಮಾಜದ ಅಧೀನ ಸಂಸ್ಥೆಯಾದ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯು ಹಲವು ವರ್ಷಗಳಿಂದ ಶೇ.100 ರಷ್ಟು ಫಲಿತಾಂಶ ಪಡೆಯುವ ಮೂಲಕ ಅಭಿವೃದ್ಧಿಯತ್ತ ಸಾಗುತಿದೆ. ಚೈನ್ ಗೇಟ್ ಬಳಿ ಇರುವ ಸಮಾಜದ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣ, ಪೆಟ್ರೋಲ್ ಬಂಕ್ ಹಾಗೂ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲು ಸಿದ್ದತೆ ನಡೆಸಲಾಗುತ್ತಿದೆ ಎಂದರು.
ಸಮಾಜದ ಅಭಿವೃದ್ಧಿಗೆ ಕೊಡವ ಅಭಿವೃದ್ಧಿ ನಿಗಮದಿಂದ 10 ಲಕ್ಷ ಬಂದಿದ್ದು, ಶಾಸಕರು, ಸಂಸದರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಸಮಾಜದ ಬೈಲಾ ತಿದ್ದುಪಡಿ ಕಾರ್ಯ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಮಡಿಕೇರಿಯ ಪೊಮ್ಮಕ್ಕಡ ಕೂಟವನ್ನು ಸಮಾಜದ ಅಂಗ ಸಂಸ್ಥೆಯಾಗಿ ಸೇರ್ಪಡೆಗೆ ತೀರ್ಮಾನಿಸಲಾಗುವುದೆಂದರು.
ಕಳೆದ ಮಾಹಾಸಭೆಯ ವರದಿ, ಆಡಳಿತ ಮಂಡಳಿ ವರದಿ, ಲೆಕ್ಕಪರಿಶೋಧನಾ ವರದಿ ಹಾಗೂ ಹಲವು ಲೆಕ್ಕಾಚಾರದ ಬಗ್ಗೆ ಚರ್ಚಿಸಲಾಯಿತು. ಸಮಾಜದ ಜಾಗದ ದಾಖಲೀಕರಣ, ಹಿಂದೆ ಕೊಡವರು ಹಲವು ಸರಕಾರಿ ಕಚೇರಿಗಳಿಗೆ ನೀಡಿದಂತ ಜಾಗದಲ್ಲಿ ದಾನಿಗಳ ಹೆಸರೇ ಇಂದು ಮರೆಯಾಗಿದ್ದು ಆ ಜಾಗದಲ್ಲಿ ದಾನಿಗಳ ಹೆಸರಿನ ಫಲಕವನ್ನು ಇಡುವಂತಾಗ ಬೇಕೆಂದು ಸದಸ್ಯರು ಒತ್ತಾಯಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೇಕಡ ವಿಜುದೇವಯ್ಯ, ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್, ನಿರ್ದೇಶಕರಾದ ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಮಂಡಿರ ಸದಾಮುದ್ದಪ್ಪ, ಕಾಳಚಂಡ ಅಪ್ಪಣ, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವಂಡ ರವಿ ಬಸಪ್ಪ, ಕನ್ನಂಡ ಕವಿತ ಬೊಳ್ಳಪ್ಪ, ಕಾಂಡೇರ ಲಲ್ಲು ಕುಟ್ಟಪ್ಪ ಇದ್ದರು. ನಿರ್ದೇಶಕಿ ಬೊಪ್ಪಂಡ ಸರಳಾ ಕರುಂಬಯ್ಯ ಪ್ರಾರ್ಥಿಸಿದರು, ಉಪಾಧ್ಯಕ್ಷ ಕೇಕಡ ವಿಜುದೇವಯ್ಯ ಸ್ವಾಗತಿಸಿದರು, ಕಾರ್ಯದರ್ಶಿ ಕನ್ನಂಡ ಸಂಪತ್ ನಿರೂಪಿಸಿದರು, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್ ವಂದಿಸಿದರು.
ಸನ್ಮಾನ: ಮರಗೋಡುವಿನ ತಾತಪಂಡ ಶೀಲಾ ಅವರು 6 ಮಕ್ಕಳನ್ನು ಹೆತ್ತು ಸಾಕಿ ಸಲಹುತ್ತಿದ್ದು, ಅವರನ್ನು ಸಮಾಜದ ಪರವಾಗಿ ಸನ್ಮಾನಿಸಿ ರೂ. 25 ಸಾವಿರ ನಗದು ನೀಡಿ ಗೌರವಿಸಲಾಯಿತು.