ಭಾಗಮಂಡಲ ಜು.18 NEWS DESK : ಕೊಡಗು ಜಿಲ್ಲೆಯ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಎಡೆಬಿಡದೆ ಧಾರಾಕಾರ ಮಳೆಯಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಪ್ರವಾಹದ ನೀರು ಶ್ರೀಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳನ್ನು ಆವರಿಸಿದೆ. ಅಕ್ಕಪಕ್ಕದ ಅಂಗಡಿಗಳು ಜಲಾವೃತಗೊಂಡಿವೆ. ಕಳೆದ 24 ಗಂಟೆಗಳಲ್ಲಿ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಆರು ಇಂಚಿಗೂ ಅಧಿಕ ಮಳೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾಗಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಎತ್ತರ ಪ್ರದೇಶ ಮತ್ತು ತಗ್ಗು ಪ್ರದೇಶದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗ್ರಾಮ ಪಂಚಾಯಿತಿ ಈಗಾಗಲೇ ಸೂಚನೆ ನೀಡಿದೆ.