ಮಡಿಕೇರಿ ಜು.18 NEWS DESK : 2024-25ನೇ ಸಾಲಿನ 32ನೇ ರಾಜ್ಯಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳು ಆ.10 ರಂದು ಕಗ್ಗೋಡ್ಲು ಗ್ರಾಮದ ದಿ.ಸಿ.ಡಿ.ದೇವಯ್ಯ ಅವರ ಗದ್ದೆಯಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ (ಮಡಿಕೇರಿ ಘಟಕ), ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಕಗ್ಗೊಡ್ಲು ಕಾವೇರಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ 9.30 ರಿಂದ ಸ್ಪರ್ಧೆಗಳು ನಡೆಯಲಿವೆ.
ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ (7 ಜನರ ತಂಡ), ಸಾರ್ವಜನಿಕ ಪುರುಷರ ವಾಲಿಬಾಲ್ (4 ಜನರ ತಂಡ), ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್ (6 ಜನರ ತಂಡ), ಪ್ರೌಢ ಶಾಲಾ ಬಾಲಕಿಯರಿಗೆ ಥ್ರೋಬಾಲ್ ಪಂದ್ಯಾವಳಿ (6 ಜನರ ತಂಡ), ಬಾಲಕರ ಹಗ್ಗಜಗ್ಗಟ ಪಂದ್ಯಾವಳಿ (7 ಜನರ ತಂಡ) ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಮಧ್ಯಾಹ್ನ 1 ಗಂಟೆಗೆ ಕೆಸರು ಗದ್ದೆ ಓಟದ ಸ್ಪರ್ಧೆ ನಡೆಯಲಿದ್ದು, ಕಿರಿಯ ಪಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 50ಮೀ ಓಟ, ಹಿರಿಯರ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 100ಮೀ ಓಟ, ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ 200 ಮೀ. ಓಟ, ಪದವಿ ಪೂರ್ವ ಕಾಲೇಜು ಬಾಲಕ, ಬಾಲಕಿಯರಿಗೆ 400 ಮೀ. ಓಟ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಯುವಕ, ಯುವತಿಯರಿಗೆ, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ 400 ಮೀ. ಓಟದ ಸ್ಪರ್ಧೆ ನಡೆಯಲಿದೆ.
ಅಲ್ಲದೆ ದಂಪತಿಗಳಿಗೆ ಹಾಗೂ ಕಾರ್ಯಕ್ರಮದ ಆಯೋಜಕರಿಗೆ 200 ಮೀ. ಓಟ, ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ ನಡೆಯಲಿದ್ದು, ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ.
ಹಗ್ಗ-ಜಗ್ಗಾಟ ಸಾರ್ವಜನಿಕ ಪುರುಷರ ಹಾಗೂ ಮಹಿಳೆಯರ ವಿಭಾಗಕ್ಕೆ, ವಾಲಿಬಾಲ್ ಮತ್ತು ಥ್ರೋಬಾಲ್ ತಂಡಗಳಿಗೆ ತಲಾ ರೂ. 1,000 ಮೈದಾನ ಶುಲ್ಕ ನಿಗಧಿಪಡಿಸಲಾಗಿದ್ದು, ಆಸಕ್ತರು ಆ.5 ರ ಅಪರಾಹ್ನ 5 ಗಂಟೆಯೊಳಗೆ ತಂಡದ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸುಕುಮಾರ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸುವ ತಂಡಗಳಿಗೆ ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಓಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪಾರಿತೋಷಕ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು.
ಪಂದ್ಯಾವಳಿಯ ನೋಂದಾವಣೆಗಾಗಿ ನವೀನ್ ದೇರಳ- 9740404520 (ಹಗ್ಗ ಜಗ್ಗಾಟ), ಕೆ.ಎಂ.ಮೋಹನ್- 9483008381 (ವಾಲಿಬಾಲ್), ಹೆಚ್ಚಿನ ಮಾಹಿತಿಗಾಗಿ ಪಿ.ಪಿ.ಸುಕುಮಾರ್-94812 13920, ಬಾಳಾಡಿ ದಿಲೀಪ್-8618568173, ಕುಂಜಿಲನ ಎಂ.ಮೋಹನ್-9480646382, ಜಯಕುಮಾರ್-9741845950, ಜಯಂತಿ-9880860263 ಸಂಪರ್ಕಿಸಬಹುದಾಗಿದೆ.