ಮಡಿಕೇರಿ ಜು.20 NEWS DESK : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಶನಿವಾರ ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿಯ ಕರ್ತೋಜಿ ಬಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಹಾಗೆಯೇ ಕೊಯನಾಡು ಬಳಿ ಮಳೆಯಿಂದ ಹಾನಿಯಾಗಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದರು. ಹೆದ್ದಾರಿಗೆ ಸಂಬಂಧಿಸಿದಂತೆ ಇಲ್ಲಿನ ಸ್ಥಳೀಯರೊಂದಿಗೆ ಸಮಾಲೋಚಿಸಿದ ಸಚಿವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಸ್ಥಳೀಯರು ಮಾತನಾಡಿ ಗುಡ್ಡದ ಮಣ್ಣನ್ನು ರಸ್ತೆಗೆ ಸಾಗಿಸುತ್ತಿದ್ದು, ಈ ಕೆಲಸ ಮೊದಲು ಸ್ಥಗಿತವಾಗಬೇಕು ಎಂದು ಸಚಿವರ ಗಮನಕ್ಕೆ ತಂದರು. 2018 ರ ನಂತರ ಗುಡ್ಡದ ಮಣ್ಣು ಕುಸಿಯುತ್ತಿದೆ. ಅದಕ್ಕೂ ಮೊದಲು ಸಮಸ್ಯೆ ಇರಲಿಲ್ಲ. ರಸ್ತೆ ಅಗಲೀಕರಣವಾದಂತೆ ಸಮಸ್ಯೆಗಳು ಹೆಚ್ಚಾದವು ಎಂದು ಸ್ಥಳೀಯರೊಬ್ಬರು ತಿಳಿಸಿದರು. ಸದ್ಯ ಇರುವ ರಸ್ತೆಯನ್ನು ಸರಿಪಡಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಬೇಕು. ಸಾಧ್ಯವಾದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು. ಇಲ್ಲದಿದ್ದಲ್ಲಿ ಎಲ್ಲರಿಗೂ ತೊಂದರೆ ಆಗಲಿದೆ ಎಂದು ಸ್ಥಳೀಯರು ಸಚಿವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಾತನಾಡಿದ ಹೆದ್ದಾರಿ ವಿಭಾಗದ ಎಂಜಿನಿಯರ್ ಗಿರೀಶ್ ಅವರು ಗುಡ್ಡದ ಮಣ್ಣನ್ನು ಬೇರೆಡೆ ಸ್ಥಳಾಂತರಿಸುತ್ತಿಲ್ಲ ಎಂದು ಮಾಹಿತಿ ನೀಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದ್ದು, ಈ ಸಂಬಂಧ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ವಿಶೇಷ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಸಂತ್ರಸ್ತರಿಗೆ ಅಗತ್ಯ ಪರಿಹಾರ ನೀಡುವುದರ ಜೊತೆಗೆ ಶಾಶ್ವತ ಸೂರು ಕಲ್ಪಿಸಲಾಗುವುದು, ಹಾಗೆಯೇ ರಸ್ತೆ, ವಿದ್ಯುತ್, ಬೆಳೆಹಾನಿ, ಮನೆ ಹಾನಿ… ಹೀಗೆ ನಷ್ಟದ ಅಂದಾಜು ಮಾಡಿ, ಸ್ಥಳೀಯ ಶಾಸಕರ ಜೊತೆಗೂಡಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ವಿವರಿಸಿದರು. ಮಳೆಯಿಂದ ಉಂಟಾಗಿರುವ ನಷ್ಟದ ಸಂಬಂಧ ಕಂದಾಯ ಸಚಿವರಿಗೂ ಮಾಹಿತಿ ನೀಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು. ಮಡಿಕೇರಿ-ಸಂಪಾಜೆ ಹೆದ್ದಾರಿ ಮಾರ್ಗದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ತ್ವರಿತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಹಿರಿಯ ಎಂಜಿನಿಯರ್ ಗಳ ಜತೆ ಚರ್ಚಿಸಲಾಗುವುದು ಎಂದರು. ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಇದರಿಂದಾಗಿ ಜನಜೀವನಕ್ಕೆ ಅಸ್ತವ್ಯಸ್ತ ಉಂಟಾಗಿತ್ತು, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಲಾಗುವುದು. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶ ಸೇರಿದಂತೆ ಹಲವು ಕಡೆಗೆ ಭೇಟಿ ನೀಡಿ, ಮಾಹಿತಿ ಪಡೆಯಲಾಗಿದೆ ಎಂದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ತಹಶೀಲ್ದಾರ್ ಪ್ರವೀಣ್ ಕುಮಾರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಪ್ರಮುಖರಾದ ಕೊಲ್ಯದ ಗಿರೀಶ್ ಇತರರು ಇದ್ದರು.