ಮಡಿಕೇರಿ ಜು.24 NEWS DESK : ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಎನ್.ಯು.ನಾಚಪ್ಪ ಅವರು ಒತ್ತಾಯಿಸಿದ್ದಾರೆ.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಸಿಎನ್‌ಸಿ ವತಿಯಿಂದ ವಿರಾಜಪೇಟೆ ಗಡಿಯಾರ ಕಂಬದ ಬಳಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕೊಡವ ಲ್ಯಾಂಡ್ ನ ಸಂರಕ್ಷಣೆಗಾಗಿ ಸರ್ವ ಕೊಡವರು ಭೂಮಾಫಿಯಾದ ವಿರುದ್ಧ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.
ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡವರ ಪರ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ವಿರುದ್ಧವಾಗಿ ಅರ್ಜಿ ಸಲ್ಲಿಸಲು ಕೆಲವು ಕೊಡವ ವಿರೋಧಿಗಳು ಷಡ್ಯಂತ್ರ ರೂಪಿಸಿದ್ದಾರೆ ಎಂದು ನಾಚಪ್ಪ ಆರೋಪಿಸಿದರು.
ಭಾಗಮಂಡಲದಲ್ಲಿ ಕೊಡವ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ಕಾಮಗಾರಿಗೆ ಭೂಪರಿವರ್ತನೆ ಮಾಡಲು ಅವಕಾಶ ನೀಡಿಲ್ಲ. ಬಲಾಢ್ಯ ಸಂವಿಧಾನೇತರ ಶಕ್ತಿಗಳು ಇದಕ್ಕೆ ಅಡ್ಡಿಯಾಗಿವೆ. ಆದರೆ ಭೂಮಾಫಿಯಾ ಮತ್ತು ಕಾರ್ಪೋರೇಟ್ ವಲಯಗಳಿಗೆ ಯಾವುದೇ ವಿಳಂಬ ಮಾಡದೆ ಒತ್ತಡಕ್ಕೆ ಮಣಿದು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡಿಕೊಡಲಾಗುತ್ತಿದೆ. ತಡಿಯಂಡ್ ಮೋಳ್ ನಿಂದ ಹಿಡಿದು ಪುಷ್ಪಗಿರಿ ಮತ್ತು ಬ್ರಹ್ಮಗಿರಿ ವರೆಗೆ ನಿಷೇಧಿತ ಪ್ರದೇಶದಲ್ಲಿ ಭೂಪರಿವರ್ತನೆಯಾಗುತ್ತಿದೆ.
ತಲಕಾವೇರಿ, ಭಾಗಮಂಡಲ ಕೊಡವ ಟ್ರಸ್ಟ್ ಅವರಿಗೆ ಸಮುದಾಯ ಭವನ ನಿರ್ಮಾಣ ಮಾಡಲು ಅವಕಾಶ ನಿರಾಕರಣೆ ಮಾಡಿರುವುದು ಸಂವಿಧಾನದ 51ಎ ಮತ್ತು 25, 26 ವಿಧಿಯ ಉಲ್ಲಂಘನೆಯಾಗಿದೆ. ಅತ್ಯಂತ ಸಣ್ಣ ಸಮುದಾಯವೊಂದು ಧಾರ್ಮಿಕ ಆಚಾರ, ವಿಚಾರಗಳನ್ನು ಮುಕ್ತವಾಗಿ ಆಚರಣೆ ಮಾಡಲು ಅಡ್ಡಿಪಡಿಸಿದಂತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡವರು ತಮ್ಮ ಜನ್ಮಭೂಮಿಯಲ್ಲಿ ನ್ಯಾಯಸಮ್ಮತವಾಗಿ ಮನೆ ನಿರ್ಮಿಸಲು ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಇಲ್ಲಸಲ್ಲದ ನಿಯಮಗಳನ್ನು ರೂಪಿಸಿ ಕಿರುಕುಳ ನೀಡಲಾಗುತ್ತಿದೆ. ಭೂಕುಸಿತ ಪ್ರದೇಶದಲ್ಲಿ ಬೃಹತ್ ರೆಸಾರ್ಟ್ ನಿರ್ಮಾಣಗೊಂಡಿದೆ. ದೇವರಕಾಡು ಲೂಟಿ ಮಾಡಿ ಕೊಡವರ ಪವಿತ್ರ ದೇವನೆಲೆ ಬಳಿಯಲ್ಲಿ ರೆಸಾರ್ಟ್ ಮಾಫಿಯಾ ಮತ್ತು ಡೆವಲಪರ್ ಗೆ ಟೌನ್ ಶಿಪ್ ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಆಂಧ್ರದ ಹಣ ಬಳಕೆಯಾಗುತ್ತಿದ್ದು, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೆöÊ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಭೂ ಪರಿವರ್ತನೆಯಲ್ಲಿ ತೊಡಗಿವೆ.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾರ್ಟ್ಗಳು, ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಿಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ವಾಣಿಜ್ಯ ದುರುದ್ದೇಶಕ್ಕಾಗಿ ಆದಿಮಸಂಜಾತ ಕೊಡವರ ಪವಿತ್ರ ಕೊಡವ ಲ್ಯಾಂಡ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಪ್ಪು ಹಣ ಚಲಾವಣೆಯಾಗುತ್ತಿದೆ. ವಿಶ್ವದಾದ್ಯಂತ ಇರುವ ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು ಹಾಗೂ ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಕೊಡಗಿನಲ್ಲಿ ರೆಸಾರ್ಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯದಿದ್ದರೂ ಕಾಫಿ ತೋಟಗಳ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಾಡಲಾಗುತ್ತಿದೆ. ನಷ್ಟ ತೋರಿಸುವುದಕ್ಕಾಗಿ ರೆಸಾರ್ಟ್ಗಳನ್ನು ನಿರ್ಮಿಸುತ್ತಿದ್ದು, ಕಪ್ಪು ಹಣವನ್ನು ಚಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಕ್ರಮ ದಂಧೆಕೋರ ಬಂಡವಾಳಶಾಹಿ ಕಂಪೆನಿಗಳು ಕಾನೂನು ದುರುಪಯೋಗ ಪಡಿಸಿಕೊಂಡು ರಾತೋರಾತ್ರಿ ಪ್ರಭಾವ ಬೀರಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಭೂಮಾಫಿಯಾಗಳು ಹಾಗೂ ರಾಜಕೀಯ ಬೆಂಬಲಿತರು ಕೊಡಗಿನ ಕಾವೇರಿ ಜಲಾನಯನ ಪ್ರದೇಶದ ಭೂಮಿಗಳನ್ನು ದೊಡ್ಡ ಮಟ್ಟದಲ್ಲಿ ಖರೀದಿಸುತ್ತಿದ್ದು, ಕಪ್ಪು ಹಣ ಚಲಾವಣೆಯಾಗುತ್ತಿದೆ. ಬೃಹತ್ ಕಾಫಿ ತೋಟಗಳ ಖರೀದಿಯ ನಂತರ ಅಕ್ಕಪಕ್ಕದ ಸಣ್ಣ ಹಿಡುವಳಿದಾರರ ಭೂಮಿಯನ್ನು ಹಣದ ಆಮಿಷವೊಡ್ಡಿ ಕಬಳಿಸಲಾಗುತ್ತಿದೆ.
ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಕಾಫಿ ತೋಟವನ್ನು ಸಂಪೂರ್ಣವಾಗಿ ಖರೀದಿಸಿ ನಿವೇಶನಗಳನ್ನಾಗಿ ಮಾರಾಟ ಮಾಡಿದ ನಂತರ ಭೂಪರಿರ್ತನೆಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಇಡೀ ಕಾಫಿ ತೋಟದ ಭೂಪರಿವರ್ತನೆಗೆ ಮುಂದಾದರೆ ಕಾನೂನಿನ ಅಡ್ಡಿ ಮಾತ್ರವಲ್ಲ ಹೋರಾಟಗಳು ನಡೆಯುತ್ತವೆ ಎನ್ನುವ ಆತಂಕ ಭೂಮಾಪಿಯಾಗಳಿಗಿದೆ. ಬೃಹತ್ ರೆಸಾರ್ಟ್ಗಳ ನಿರ್ಮಾಣದಿಂದ ವ್ಯವಹಾರ ಕುಸಿದರೂ ಕಪ್ಪು ಹಣವನ್ನು ಬಿಳಿ ಮಾಡುವುದಕ್ಕಾಗಿ ಇದನ್ನು ಬಳಸುವ ಹುನ್ನಾರವಿದೆ.
ಸರ್ಕಾರಗಳು ಡಾ.ಸ್ವಾಮಿನಾಥನ್ ಸಮಿತಿಯ ವರದಿಯನ್ನು ಉಲ್ಲಂಘಿಸಿವೆ. ಸ್ವಾಮಿನಾಥನ್ ತಮ್ಮ ವರದಿಯಲ್ಲಿ ಕೃಷಿಭೂಮಿಯನ್ನು ಹಾಗೆಯೇ ಉಳಿಸಿಕೊಳ್ಳಲು ಶಿಫಾರಸ್ಸು ಮಾಡಿದ್ದಾರೆ. ಲಭ್ಯವಿರುವ ಕೃಷಿಭೂಮಿಯ ಪ್ರಮಾಣ ಕಡಿಮೆಯಾದಂತೆ ಗ್ರಾಹಕರಿಗೆ ಲಭ್ಯವಿರುವ ಆಹಾರದ ಗುಣಮಟ್ಟ ಕಡಿಮೆಯಾಗುತ್ತದೆ. ಇದು ಆರ್ಥಿಕತೆಗೆ ಮಾತ್ರವಲ್ಲದೆ ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಆರ್ಟಿಕಲ್ 51(ಎ), 51ಎ (ಎಫ್) – ನಮ್ಮ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಮೌಲ್ಯೀಕರಿಸಲು ಮತ್ತು ಸಂರಕ್ಷಿಸಲು, 51ಎ(ಜಿ)-ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡಂತೆ ನೈಸರ್ಗಿಕ ಆರ್ಥಿಕತೆಯನ್ನು ಮೌಲ್ಯೀಕರಿಸಲು, ರಕ್ಷಿಸಲು, ಸುಧಾರಿಸಲು ಮತ್ತು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಲು, 51ಎ(ಎನ್)-ವೈಜ್ಞಾನಿಕ ಮನೋಭಾವ, ಮಾನವತಾವಾದ, ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕುಟ್ಟ-ಶ್ರೀಮಂಗಲದಲ್ಲಿ ಉದ್ದೇಶಿತ ಪಟ್ಟಣಗಳು ಮತ್ತು ಆರ್ಥಿಕ ಕಾರಿಡಾರ್‌ಗಳಿಗಾಗಿ ಭೂಮಿಯನ್ನು ಜೂಜಾಟದ ರೀತಿಯಲ್ಲಿ ಖರೀದಿಸಲಾಗುತ್ತಿದೆ. ಕೊಡಗಿನಲ್ಲಿ ಭೂಪರಿವರ್ತನೆ ಮಾಡುವುದಿಲ್ಲವೆಂದು ಹೇಳುತಲೇ ಒಂದೇ ಸರ್ವೆ ನಂಬರ್ ಬಳಸಿ ಹಲವರಿಗೆ ಭೂದಾಖಲಾತಿ ಮಾಡಿರುವ ಉದಾರಣೆಗಳಿವೆ.
ಬೆಂಗಳೂರು, ತಿರುವನಂತಪುರ, ಚೆನ್ನೆöÊ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ. ಶ್ರೀಮಂಗಲ ಮತ್ತು ಕುಟ್ಟ ಭಾಗದಲ್ಲಿ ಗಡಿ ಜಿಲ್ಲೆ ಹಾಗೂ ಗಡಿರಾಜ್ಯದ ಮತಬ್ಯಾಂಕ್ ಗಳನ್ನು ಸೆಳೆಯುವ ದೊಡ್ಡ ಷಡ್ಯಂತ್ರವೂ ನಡೆಯುತ್ತಿದೆ ಎಂದು ನಾಚಪ್ಪ ಆರೋಪಿಸಿದರು.
ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಜಾನಪದ ಪರಂಪರೆ ಮತ್ತು ಭೂಮಿಯೊಂದಿಗೆ ಬೆಸೆದುಕೊಂಡಿರುವ ಕೊಡವರ ಯೋಧರ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಈ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಗಾಗಿ ಸ್ವಯಂ-ಆಡಳಿತವನ್ನು ಸಂವಿಧಾನದ ವಿಧಿ 244, 371 ಆರ್/ಡಬ್ಲ್ಯೂ 6 ಮತ್ತು ೮ನೇ ಶೆಡ್ಯೂಲ್ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳು ವಿಶ್ವರಾಷ್ಟ್ರ ಸಂಸ್ಥೆ ಹೊರಡಿಸಿರುವ ಆದಿಮಸಂಜಾತ ಜನಾಂಗದ ಹಕ್ಕುಗಳ ಅಂತರಾಷ್ಟ್ರೀಯ ಕಾನೂನಿನಂತೆ ಜಾರಿಯಾಗುವ ಅಗತ್ಯವಿದೆ ಎಂದರು.
ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ಎನ್.ಯು.ನಾಚಪ್ಪ ಹೇಳಿದರು.
ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕರ್ನಲ್ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಮನೆಯಪಂಡ ಕಾಂತಿ ಸತೀಶ್, ಬಲ್ಲಡಿಚಂಡ ಬೇಬಿ ಮೇದಪ್ಪ, ಮಾಳೇಟಿರ ಶ್ರೀನಿವಾಸ್, ಮಾಚೇಟಿರ ಚೋಟು ಕಾವೇರಿಪ್ಪ, ಮಾಳೇಟಿರ ಕುಶಾಲಪ್ಪ, ಬಲ್ಲಚಂಡ ರವಿ, ಸೋಮೆಯಂಡ ಬೋಸು, ಕೇಟೋಳಿರ ಸೋಮಣ್ಣ, ಉದಿಯಂಡ ಚೆಂಗಪ್ಪ, ಸೋಮೆಯಂಡ ರೇಶ, ಮಾತಂಡ ಕಂಬ ಉತ್ತಯ್ಯ, ಬಾಳೆಯಡ ಮಂದಪ್ಪ, ಐತಿಚಂಡ ಬನ್ಸಿ, ಪಾಲೆಕಂಡ ಪ್ರತಾಪ್, ಅಪ್ಪಾರಂಡ ವಿವೇಕ್, ಪಟ್ರಪಂಡ ರಮೇಶ್, ನೆರ್ಪಂಡ ಜಿಮ್ಮಿ, ಅಜ್ಜಿನಿಕಂಡ ಪ್ರಭು ಮೊಣ್ಣಯ್ಯ, ಮಂಡೇಪಂಡ ರಾಜೇಶ್, ಉದ್ದಪಂಡ ಕಾರ್ತಿಕ್, ಪೊರ್ಕೊಂಡ ನಾಚಪ್ಪ, ಕಾಳೇಂಗಡ ರಮೇಶ್, ಪುಟ್ಟಿಚಂಡ ನವೀನ್, ಪುಟ್ಟಿಚಂಡ ನರು, ಐಚೆಟ್ಟೀರ ರಂಜಿ ಕುಟ್ಟಯ್ಯ, ಐಚೆಟ್ಟೀರ ಮೋಹನ್, ಅಪ್ಪನೆರವಂಡ ರಾಮು ಮೇದಪ್ಪ, ಚೆಂಗಂಡ ಚಾಮಿ, ಪಾಲೆಕಂಡ ರಮೇಶ್, ಪಾಲೆಕಂಡ ರತ್ನ, ಕಾನತಂಡ ರಮೇಶ್, ಅಮ್ಮಂಡ ವಾಸು, ಸೋಮೆಯಂಡ ಮನು, ಬೇಪಡಿಯಂಡ ಅಮಿತ್, ಬೇಪಡಿಯಂಡ ಪೊನ್ನಣ್ಣ, ಬೇಪಡಿಯಂಡ ವಿವಿನ್, ಚಂಬಂಡ ಸಂತೋಷ, ಕಾಂಡೇರ ಸುರೇಶ್, ಮೂಕೊಂಡ ದಿಲೀಪ್, ಚಂಬಂಡ ಜನತ್, ಅಜ್ಜಿಕುಟ್ಟಿರ ಲೋಕೇಶ್, ಅಪ್ಪಾರಂಡ ಪ್ರಸಾದ್, ಕಿರಿಯಮಾಡ ಶರೀನ್, ಪಾರ್ವಂಗಡ ನವೀನ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಅಪ್ಪೆಂಗಡ ಮಾಲೆ, ಅಪ್ಪಾರಂಡ ತಿಮ್ಮಯ್ಯ, ನಂದೇಟಿರ ರವಿ, ಪುದಿಯೋಕದ ಕಾಶಿ, ಜಮ್ಮಡ ಮೋಹನ್, ಪುಟ್ಟಿಚಂಡ ಡಾನ್ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ಕೊಡವಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಮುಂದಿನ ಮಾನವ ಸರಪಳಿ ಕಾರ್ಯಕ್ರಮ ಜು.28 ರಂದು ಟಿ.ಶೆಟ್ಟಿಗೇರಿ, ಆ.10 ರಂದು ಮಾದಾಪುರ ಹಾಗೂ ಆ.18 ರಂದು ಸುಂಟಿಕೊಪ್ಪದಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಅವರು ಇದೇ ಸಂದರ್ಭ ತಿಳಿಸಿದರು.