ನಾಪೋಕ್ಲು ಜು.30 NEWS DESK : ಸಾರ್ವಜನಿಕರು ದೂರವಾಣಿ ಕರೆ ಮಾಡಿ ಸಂಕಷ್ಟ ತೋಡಿಕೊಂಡಾಗ ಅವರಿಗೆ ಸ್ಪಂದಿಸುವ ಗುಣವನ್ನು ರೂಡಿಸಿಕೊಳ್ಳಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಮ್ಮೆಮಾಡು ಪಂಚಾಯಿತಿ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ತಮ್ಮ ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಈ ಸಂದರ್ಭ ಮಾತನಾಡಿದ ಶಾಸಕರು, ಮಳೆಗಾಳಿಗೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಸಹಜವಾಗಿ ಹದಗೆಡುತ್ತದೆ. ಈ ಸಂಧರ್ಭದಲ್ಲಿ ಜನರು ಸಂಭಂದಿಸಿದ ಅಧಿಕಾರಿ, ಸಿಬ್ಬಂದಿಗಳಿಗೆ ಕರೆ ಮಾಡುತ್ತಾರೆ. ಅವರ ಕರೆಯನ್ನು ಸ್ವೀಕರಿಸುವ ಸೌಜನ್ಯ ಬೆಳೆಸಿಕೊಳ್ಳಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅತೀ ಗಾಳಿಯಿಂದ ಜಿಲ್ಲೆಯಲ್ಲಿ 2318 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಇವುಗಳನ್ನು ತ್ವರಿತವಾಗಿ ಸರಿಪಡಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದರು. ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾಗಿರುವ ರಸ್ತೆಗಳ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದು, ಎಲ್ಲವನ್ನು ಸರಿಪಡಿಸಲು ಬದ್ದನಿದ್ದೇನೆ ಎಂದರು. 2018 ರಲ್ಲಿ ಆಗಷ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಆದ ಅನಾಹುತದ ಬಗ್ಗೆ ಸ್ಮರಿಸಿದ ಪೊನ್ನಣ್ಣ, ಆಗಷ್ಟ್ ನಲ್ಲಿ ಮಳೆಯಿಂದ ಆಗುವ ಅನಾಹುತಗಳನ್ನು ತಡೆಯಲು ಅಧಿಕಾರಿಗಳ ಜೊತೆಗೆ ಎಲ್ಲಾ ನಾಗರೀಕರು ಸಜ್ಜಾಗಿರಲು ಕರೆ ನೀಡಿದರು.ಮಡಿಕೇರಿ ತಹಶಿಲ್ದಾರ್ ಪ್ರವೀಣ್, ಕಂದಾಯ ಪರಿವೀಕ್ಷಕ ರವಿಕುಮಾರ್, ಕೆಇಬಿ, ಪಿ ಡಬ್ಲೂ ಡಿ ಇಂಜಿನಿಯರ್‌ಗಳು, ಸಿಬ್ಬಂದಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷ ಹಂಸ, ಮಾಚೇಟಿರ ಕುಸು ಕುಶಾಲಪ್ಪ, ಬಿದ್ದಾಟ೦ಡ ತಮ್ಮಯ್ಯ, ಪಂಚಾಯತ್ ಸದಸ್ಯರುಗಳಾದ ಐಸಮ್ಮ,ಇಸ್ಮಾಯಿಲ್, ಗಫೂರ್, ಯೂಸುಫ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.