ಮಡಿಕೇರಿ ಜು.30 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸಂಯುಕ್ತಾಶ್ರಯದಲ್ಲಿ ಆ.4 ರಂದು ನಗರದಲ್ಲಿ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿಂತನೆಯಡಿ ‘ಕಕ್ಕಡ ನಮ್ಮೆ’ಯನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಕಕ್ಕಡ ನಮ್ಮೆಗೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವ0ಡ ಮುತ್ತಪ್ಪ ಅವರು ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ತಾವೇ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೈಸೂರಿನ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಕನ್ನಂಡ ಕವಿತ ಬೊಳ್ಳಮ್ಮ ಪಾಲ್ಗೊಳ್ಳಲಿದ್ದಾರೆ ಎಂದರು. ಕೊಡವ ಮಾಸ ‘ಕಕ್ಕಡ’ ಜುಲೈ 16 ರಂದು ಆರಂಭಗೊಳ್ಳುತ್ತದೆ. ಈ ಮಾಸದ 18 ನೇ ದಿನವಾದ ಆ.3 ರಂದು ಕೊಡಗಿನಾದ್ಯಂತ ಇಲ್ಲಿನ ಸಂಸ್ಕೃತಿಗೆ ತಕ್ಕಂತೆ ಪ್ರತಿ ಮನೆ ಮನೆಗಳಲ್ಲಿ ‘ಮದ್ದ್ ಪಾಯಸ’ವನ್ನು ಮಾಡಿ ಕಕ್ಕಡವನ್ನು ಹಬ್ಬದಂತೆ ಆಚರಣೆ ಮಾಡಲಾಗುತ್ತದೆ. ಅಕಾಡೆಮಿ ಮತ್ತು ಪೊಮ್ಮಕ್ಕಡ ಕೂಟದಿಂದ ಮರು ದಿನ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕಕ್ಕಡ ನಮ್ಮೆಯನ್ನು ಆಚರಿಸಲಾಗುತ್ತದೆ. ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ‘ಕಕ್ಕಡ ತಿಂಗತ್‌ರ ನೈಪು-ಪೈಪು-ತೀನಿ’ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರ ಮಂಡನೆ ಮಾಡಲಿದ್ದಾರೆಂದು ತಿಳಿಸಿದರು. ಖಾದ್ಯ ಪೈಪೋಟಿ- ಕಕ್ಕಡ ನಮ್ಮೆಯಲ್ಲಿ ವಿಶೇಷವಾಗಿ ‘ಕಕ್ಕಡ ತೀನಿ ಚಡ್‌ತ’ ಎನ್ನುವ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ಮನೆಯಿಂದ ಮಾಡಿ ತಂದ ಮದ್ದ್ ಪಾಯಸ, ತಾತೆ ತೊಪ್ಪು ಪಲ್ಯ, ಕುದುರೆ ಪುಟ್ಟ್, ಚೆಕ್ಕೆಕುರು ಪಜ್ಜಿ, ನಾಡ್ ಕೋಳಿಕರಿ, ಪಂದಿಕರಿ, ಞಂಡ್ ಕರಿ, ಬೈಂಬಳೆ ಕರಿ, ಕಾಡ್ ಮಾಂಗೆ ಕರಿ, ಬಾಳೆ ನುರ್‌ಕ್ ಸ್ಪರ್ಧೆಯನ್ನು ಆಯೋಜಿಸಲಾಗಿದೆಯೆಂದು ಮಾಹಿತಿ ನೀಡಿದರು. ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ. ಗಿರೀಶ್ ಮಾತನಾಡಿ, ಯುವ ಸಮೂಹಕ್ಕೆ ಕೊಡಗಿನ ಸಂಸ್ಕೃತಿಯೊಂದಿಗೆ ಮಿಳಿತವಾಗಿರುವ ಹಬ್ಬ ಹರಿದಿನಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಕ್ಕಡ ನಮ್ಮೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪೊಮ್ಮಕ್ಕಡ ಕೂಟದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಮ್ಮ ಮಾತನಾಡಿ, ಕಕ್ಕಡ ಪೈಪೋಟಿಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಕಾರ್ಯಕ್ರಮದ ಸಂಚಾಲಕರಾದ ಕಂಬೆಯಂಡ ಡೀನಾ ಬೋಜಣ್ಣ ಮತ್ತು ಚೊಟ್ಟೆಯಂಡ ಎ. ಸಂಜು ಕಾವೇರಪ್ಪ, ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿ ಸದಸ್ಯರನ್ನು ಹಾಗೂ ಅಕಾಡೆಮಿ ಕಚೇರಿಯನ್ನು ಆ.3 ರ ಮಧ್ಯಾಹ್ನ 12 ಗಂಟೆಯ ಒಳಗೆ ಸಂಪರ್ಕಿಸಿ ಹೆಸರನ್ನು ದಾಖಲಿಸಿಕೊಳ್ಳಬಹುದು. ಸುದ್ದಿಗೋಷ್ಠಿಯಲ್ಲಿ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬೊಳ್ಳಜಿರ ಯಮುನ ಅಯ್ಯಪ್ಪ, ಕಾರ್ಯಕ್ರಮ ಸಂಚಾಲಕರಾದ ಕಂಬೆಯಂಡ ಡೀನಾ ಬೋಜಣ್ಣ ಹಾಗೂ ಚೊಟ್ಟೆಯಂಡ ಸಂಜು ಕಾವೇರಪ್ಪ ಉಪಸ್ಥಿತರಿದ್ದರು. 







