ಮಡಿಕೇರಿ ಜು.30 NEWS DESK : ಜಿಲ್ಲೆಯಾದ್ಯಂತ ಮಳೆ ತೀವ್ರಗೊಳ್ಳುತ್ತಿರುವುದರಿಂದ ತುರ್ತಾಗಿ ಮಡಿಕೇರಿ ನಗರದಲ್ಲಿ ಮೂಲಭೂತ ಸೌಲಭ್ಯವಿರುವ ಕಾಳಜಿ ಕೇಂದ್ರವನ್ನು ಆರಂಭಿಸಬೇಕೆ0ದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮನವಿ ಮಾಡಿದೆ.
ನಗರಸಭಾ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಹಾಗೂ ಪ್ರಮುಖರು, ಭಾರೀ ಗಾಳಿ ಮಳೆಯಿಂದಾಗಿ ಬಡವರು, ಕೂಲಿ ಕಾರ್ಮಿಕರು ಹಾಗೂ ಬೆಟ್ಟಗುಡ್ಡದ ನಿವಾಸಿಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಗಮನ ಸೆಳೆದರು.
ಕೆ.ಜಿ.ಪೀಟರ್ ಮಾತನಾಡಿ ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಮಡಿಕೇರಿ ನಗರದಲ್ಲಿ ಕೂಡ ಗಾಳಿ ಮಳೆಯ ಪ್ರಮಾಣ ಅಧಿಕವಾಗುತ್ತಿದೆ. ಮಳೆ ನಿರಂತರವಾಗಿರುವುದರಿ0ದ ಅಪಾಯದ ಮುನ್ಸೂಚನೆ ಎದುರಾಗಿದೆ. ಮಡಿಕೇರಿ ನಗರದಲ್ಲಿ ಅನೇಕ ಬಡವರ ಹಾಗೂ ಕೂಲಿ ಕಾರ್ಮಿಕರ ಮನೆಗಳು ಎತ್ತರ ಮತ್ತು ತಗ್ಗು ಪ್ರದೇಶದಲ್ಲಿದ್ದು, ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ತುರ್ತಾಗಿ ನಗರಸಭೆ ಮೂಲಕ ಮೂಲಭೂತ ಸೌಲಭ್ಯವಿರುವ ಕಾಳಜಿ ಕೇಂದ್ರವನ್ನು ಸ್ಥಾಪಿಸಿ ಅಪಾಯದಂಚಿನಲ್ಲಿರುವವರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಬೇಕು. ಅಲ್ಲದೆ ಬಡವರ ಮನೆಗಳ ಸುರಕ್ಷತೆಗಾಗಿ ಪ್ರತಿವರ್ಷದಂತೆ ಈ ಬಾರಿ ಕೂಡ ಟಾರ್ಪಲ್‌ಗಳನ್ನು ವಿತರಿಸಬೇಕೆಂದು ಮನವಿ ಮಾಡಿದರು.
ಮೂಡ ಸದಸ್ಯ ಕಾನೆಹಿತ್ಲು ಮೊಣ್ಣಪ್ಪ, ಅಲ್ಪಸಂಖ್ಯಾತರ ಘಟಕದ ಮಡಿಕೇರಿ ನಗರಾಧ್ಯಕ್ಷ ಎಂ.ಬಿ.ಕೌಸರ್, ಮಡಿಕೇರಿ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಹಬೀಬ್ ಅಹಮ್ಮದ್, ಪ್ರಮುಖರಾದ ಹರೀಶ್, ಬೈ.ಶ್ರೀ ಪ್ರಕಾಶ್, ಬಿ.ಟಿ.ಪ್ರಶಾಂತ್ ಮನವಿ ನೀಡುವ ಸಂದರ್ಭ ಹಾಜರಿದ್ದರು.
ನಗರಸಭೆ ಪೌರಾಯುಕ್ತರು ಮನವಿಗೆ ಸ್ಪಂದಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.