ಮಡಿಕೇರಿ ಜು.31 NEWS DESK : ವಿದ್ಯುತ್ ಸೇರಿದಂತೆ ಮೂಲಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಸರಿಯಾದ ಜಾಗೃತಿ ಇಲ್ಲದಿರುವುದರಿಂದಲೇ ಅನೇಕ ಸಮಸ್ಯೆಗಳಿಗೆ ನಿರೀಕ್ಷಿತ ಪರಿಹಾರ ದೊರಕದಾಗಿದೆ. ತಮ್ಮ ಮೂಲ ಹಕ್ಕುಗಳ ಬಗ್ಗೆ ಗ್ರಾಹಕರು ಜಾಗೃತರಾಗಬೇಕಾದ ಅನಿವಾಯ೯ತೆ ಇಂದಿನ ಕಾಲಘಟ್ಟದಲ್ಲಿದೆ ಎಂದು ಬೆಂಗಳೂರಿನ ಗ್ರಾಹಕರ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ಸ್ಥಾಪಕಾಧ್ಯಕ್ಷ ವೈ.ಜಿ.ಮುರಳೀಧರನ್ ಕರೆ ನೀಡಿದ್ದಾರೆ.
ನಗರದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿತ ಗ್ರಾಹಕರ ಹಕ್ಕುಗಳ ಕುರಿತ ಸಂವಾದ ಕಾಯ೯ಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್, ಆಹಾರಪದಾಥ೯ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಅದನ್ನು ಬಳಸುವ ಗ್ರಾಹಕರಿಗೆ ತಮ್ಮ ಮೂಲ ಹಕ್ಕುಗಳ ಬಗ್ಗೆಯೇ ಸರಿಯಾದ ತಿಳುವಳಿಕೆ ಇಲ್ಲದಾಗಿದೆ. ಇದರಿಂದಾಗಿಯೇ ಸಮಸ್ಯೆಗಳು ಪರಿಹಾರ ಕಾಣುವ ಬದಲಿಗೆ ಮತ್ತಷ್ಟು ಹೆಚ್ಚಾಗುತ್ತಿದೆ, ಗ್ರಾಹಕರು ಜಾಗೃತರಾದಾಗ ಮಾತ್ರ ಅನೇಕ ಸಮಸ್ಯೆಗಳು ಸಮಾಜದಲ್ಲಿ ಪರಿಹಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆ ಹಾಗೂ ಅಭಿವೖದ್ದಿ ಯೋಜನೆಗಳಲ್ಲಿ ಸಮನ್ವಯ ಇದ್ದಾಗ ಯಾವುದೇ ಸಮಸ್ಯೆಯಾಗುವುದಿಲ್ಲ, ದೇಶದಲ್ಲಿ ಅಭಿವೃದ್ಧಿ ಯೋಜನೆಗಳು ಪರಿಸರ ಸಮತೋಲನದೊಂದಿಗೆ ಜಾರಿಯಾದಾಗ ದೇಶದ ಪ್ರಗತಿಯೂ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟ ಮುರಳೀಧರ್, ವಿದ್ಯುತ್ ರಂಗದಲ್ಲಿ ನಗರ ಪ್ರದೇಶಗಳ ಪೈಕಿ ಬಿಲ್ ಸಮಸ್ಯೆ ಕಂಡುಬರುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆ ಎದುರಿಸುತ್ತಿದ್ದೇವೆ, ಗ್ರಾಹಕ ತನಗೆ ಬರುವ ಬಿಲ್ ನ್ನು ಸರಿಯಾಗಿ ತಿಳಿದುಕೊಳ್ಳದೇ ಇರುವುದರಿಂದಾಗಿ ಅನೇಕ ಗ್ರಾಹಕರು ಸಮಸ್ಯೆ ಎದುರಿಸುವಂತಾಗಿದೆ, ವಿದ್ಯುತ್ ನಿಯಂತ್ರಣಗಳೇನು, ಗ್ರಾಹಕರಿಗೆ ಇರುವ ಹಕ್ಕುಗಳೇನು ಎಂಬುದನ್ನು ಸ್ಥಳೀಯವಾಗಿ ಸಂಘಸಂಸ್ಥೆಗಳ ಮೂಲಕ ಜನರಿಗೆ ತಿಳಿಸಬೇಕಾದ ಅಗತ್ಯ ಇಂದಿನ ಕಾಲಘಟ್ಟದಲ್ಲಿದೆ ಎಂದೂ ಮುರಳೀಧರನ್ ಹೇಳಿದರು.
ಗ್ರಾಹಕರಿಗೆ ಸರಬರಾಜಾಗುವ ವಿದ್ಯುತ್ ನ ಗುಣಮಟ್ಟಕ್ಕೆ ಕೂಡ ಮಾನದಂಡವಿದೆ, ವಿದ್ಯುತ್ ದರ ಪರಿಷ್ಕರಿಸುವ ಮುನ್ನ ಗ್ರಾಹಕನ ಅಭಿಪ್ರಾಯವನ್ನೂ ಕೇಳಬೇಕಾಗಿದೆ, ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಇಂಥ ಆಗುಹೋಗುಗಳ ಬಗ್ಗೆ ಗ್ರಾಹಕ ಕೂಡ ಮೌನವಹಿಸದೇ ಜಾಗ್ರತನಾಗಿ ಪ್ರಶ್ನಿಸುವ ಅನಿವಾಯ೯ತೆ ಇಂದಿದೆ ಎಂದು ಅವರು ಹೇಳಿದರು.
ಪ್ರತೀ ತಿಂಗಳು ಪಡೆಯುವ ವಿದ್ಯುತ್ ಬಿಲ್ ನ್ನು ಎಷ್ಟು ಗ್ರಾಹಕರು ಸರಿಯಾಗಿ ಓದಿ ಮಾಹಿತಿ ತಿಳಿಯುತ್ತಾರೆ ಎಂದು ಪ್ರಶ್ನಿಸಿದ ಮುರಳೀಧರನ್ ,ಬಿಲ್ ನಲ್ಲಿ ನಮೂದಿಸಲಾಗುವ ಎಲ್ಲಾ ಅಂಶಗಳನ್ನು ಸರಿಯಾಗಿ ಓದಿ ಸೂಕ್ತವಾಗಿದೆಯೇ ಎಂದಾದ ಮೇಲೆ ಬಿಲ್ ಪಾವತಿಸಬೇಕು, ಇಲ್ಲದೇ ಹೋದಲ್ಲಿ ಬಿಲ್ ತಪ್ಪಾಗಿದ್ದರೂ ಗ್ರಾಹಕನ ಮೌನ ಭವಿಷ್ಯದಲ್ಲಿ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂದು ಮುರಳೀಧರನ್ ಎಚ್ಚರಿಸಿದರು.
ಕೊಡಗು ಜಿಲ್ಲಾ ಚೆಸ್ಕಾಂ ಅಧಿಕಾರಿ ಅನಿತಾಭಾಯಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯಲ್ಲಿ 13 ವಿದ್ಯುತ್ ಸಬ್ ಸ್ಚೇಷನ್ ಗಳ ಅಗತ್ಯವಿದ್ದು ಆದರೆ ಕೇವಲ 2 ಸಬ್ ಸ್ಟೇಷನ್ ಗಳು ಕಾಯ೯ನಿವ೯ಹಿಸುತ್ತಿದೆ, ಹೆಚ್ಚುವರಿ ಸಬ್ ಸ್ಟೇಷನ್ ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇದು ಮಂಜೂರಾಗಿ ಕಾಯ೯ಪ್ರವೖತ್ತವಾದಲ್ಲಿ ಕೊಡಗಿನೆಲ್ಲಡೆ ವಿದ್ಯುತ್ ಸಮಸ್ಯೆ ಪರಿಹಾರ ಸಾಧ್ಯವಿದೆ ಎಂದರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಪ್ಪನೆರವಂಡ ನಂದಾ ಬೆಳ್ಯಪ್ಪ ಮಾತನಾಡಿ, ಚೆಸ್ಕಾಂ ಮತ್ತು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ನಡುವೆ ಸೌಹಾಧ೯ತೆ ಇದ್ದಾಗ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ. ಬೆಳೆಗಾರರನ್ನು ಗಣನೆಗೆ ತೆಗೆದುಕೊಂಡು ವಿಶ್ವಾಸಯುತವಾಗಿ ಕಾಯ೯ನಿವ೯ಹಿಸಿದಾಗ ಚೆಸ್ಕಾಂಗೆ ತೋಟದೊಳಗೆ ಕೂಡ ತಂತಿ ಮಾಗ೯ ಹಾಕಲು ಸುಲಭಸಾಧ್ಯವಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಕೊಡಗಿನ ಕಾಫಿ ಬೆಳೆಗಾರರೂ ಸೇರಿದಂತೆ ಕೖಷಿಕರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಸಂಬಂಧಿತ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಗೌರವ ಸಲಹೆಗಾರ ಕೆ,ಕೆ,ವಿಶ್ವನಾಥ್, ವಂದಿಸಿದ ಕಾಯ೯ಕ್ರಮದಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಅಜ್ಜೀರಂಡ ಎ.ಚಂಗಪ್ಪ, ಅಸೋಸಿಯೇಷನ್ ಕಾಯ೯ದಶಿ೯ ಚೊಟ್ಟೇರ ಕೆ.ಬೆಳ್ಯಪ್ಪ ಹಾಜರಿದ್ದರು. ಜಿಲ್ಲೆಯಾದ್ಯಂತಲಿನ ಬೆಳೆಗಾರ ಸದಸ್ಯರು ಸಂವಾದದಲ್ಲಿ ಪಾಲ್ಗೊಂಡು ಅನೇಕ ಮಾಹಿತಿಗಳನ್ನು ಗ್ರಾಹಕರ ಹಕ್ಕುಗಳ ಬಗ್ಗೆ ಪಡೆದರು.
ವಿದ್ಯುತ್ ನಿಯಂತ್ರಣ ಆಯೋಗದ ಪ್ರಯೋಜನ ಪಡೆಯಿರಿ :: 2003 ರಲ್ಲಿ ವಿದ್ಯುತ್ ಕಾಯಿದೆ ಜಾರಿಯಾದಲ್ಲಿಂದ ವಿದ್ಯುತ್ ರಂಗ ಸಾಕಷ್ಟು ಬದಲಾವಣೆ ಕಂಡಿದೆ. ಸಕಾ೯ರದ ಹಿಡಿತದಲ್ಲಿದ್ದ ವಿದ್ಯುತ್ ಉತ್ಪಾದನೆ, ಪ್ರಸರಣ, ಸರಬರಾಜು ಖಾಸಗಿ ವಲಯಕ್ಕೆ ಹೋಗಿದೆ, ವಿದ್ಯುತ್ ಕ್ಷೇತ್ರವನ್ನು ನಿಯಂತ್ರಿಸಲು ಪ್ರತ್ಯೇಕವಾದ ವಿದ್ಯುತ್ ನಿಯಂತ್ರಣ ಆಯೋಗ ರಚಿಸಲಾಗಿದೆ. ಬಳಕೆದಾರರ ಹಿತವನ್ನು ರಕ್ಷಿಸುವುದು ಈ ಯೋಗದ ಮುಖ್ಯ ಕತ೯ವ್ಯವಾಗಿದ್ದು ಆಯೋಗದ ಪ್ರಯೋಜನವನ್ನು ಗ್ರಾಹಕರು ಪಡೆದುಕೊಂಡು ವಿದ್ಯುತ್ ಸಂಬಂಧಿತ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದೂ ಮುರಳೀಧರ್ ಮಾಹಿತಿ ನೀಡಿದರು.