ಮಡಿಕೇರಿ ಜು.31 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 29ನೇ ವರ್ಷದ “ಕಕ್ಕಡ-18” ಆಚರಣೆ ಆ.2 ರಂದು ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಶ್ವ ವಿಖ್ಯಾತ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಆಪ್ತ, ವಿರಾಟ್ ಹಿಂದೂಸ್ಥಾನ್ ಸಂಗಮ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಗುವುದು ಮತ್ತು “ಕಕ್ಕಡ-18” ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಗುವುದು. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಡವರು ಆರಾಧಿಸುವ ಪ್ರಕೃತಿ ಸಿರಿಯ ಕೊಡವ ಮಾತೃಭೂಮಿಯನ್ನು ಉಳಿಸಿಕೊಳ್ಳುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಗುವುದು.
ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ನೀಡಬೇಕು, ಕೊಡವರಿಗೆ ಎಸ್‌ಟಿ ಟ್ಯಾಗ್ ಘೋಷಿಸಬೇಕು, ಆರ್ಟಿಕಲ್ 244ನೇ ವಿಧಿ ಮತ್ತು 6 ಮತ್ತು 8ನೇ ಶೆಡ್ಯೂಲ್ ಪ್ರಕಾರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಒದಗಿಸಬೇಕು, ಕೊಡವ ಬುಡಕಟ್ಟು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಬೇಕು, ಕೊಡವರು, ಅವರ ಪಾರಂಪರಿಕ ಭೂಮಿ, ಭಾಷೆ, ಪರಿಸರ, ಜಲಸಂಪನ್ಮೂಲ, ಜಾನಪದ ಪರಂಪರೆ, ರಾಜಕೀಯ ಅಸ್ಮಿತೆ ಮತ್ತು ಐತಿಹಾಸಿಕ ನಿರಂತರತೆ, ಸಾಂಪ್ರದಾಯಿಕ ಆವಾಸಸ್ಥಾನಗಳನ್ನು ಗುರುತಿಸಬೇಕು ಮತ್ತು ರಾಜ್ಯಾಂಗ ಖಾತ್ರಿ ನೀಡಬೇಕು. ಆದಿಮಸಂಜಾತ ಜನಾಂಗಗಳ ಹಕ್ಕುಗಳ ಸಂರಕ್ಷಣೆಗಾಗಿ ವಿಶ್ವ ರಾಷ್ಟ್ರ ಸಂಸ್ಥೆ ಯುಎನ್‌ಒ ಒಡಂಬಡಿಕೆಯAತೆ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವರ ಹಕ್ಕುಗಳನ್ನು ಘೋಷಿಸಬೇಕು ಮತ್ತು ಪೋಷಿಸಬೇಕು ಎಂದು ಹಕ್ಕೊತ್ತಾಯ ಮಂಡಿಸುವುದಾಗಿ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಅತ್ಯಂತ ಸೂಕ್ಷ್ಮವಾದ ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯದ ಪ್ರಕೃತಿ ಆರಾಧನೆಗೆ ಪೂರಕವಾದ ಜಾನಪದೀಯ ವಿಶಿಷ್ಟ ಆಚರಣೆಯಾದ “ಕಕ್ಕಡ-18” ನ್ನು ಮುಂದಿನ ಕೊಡವ ಯುವ ಪೀಳಿಗೆಗೆ ಹಾಗೂ ವಿಶ್ವಕ್ಕೆ ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಸಿಎನ್‌ಸಿ ಸಂಘಟನೆ ಕಳೆದ 29 ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ.
ಮಾತೃಭೂಮಿ, ಜಲದೇವಿ, ವನದೇವಿ, ಕೃಷಿ ಪದ್ಧತಿ, ಯೋಧ ಪರಂಪರೆಯೊ0ದಿಗೆ ಬೆಸೆದುಕೊಂಡಿರುವ ಕೊಡವರ ಜನಪದೀಯ ಧಾರ್ಮಿಕ ಮತ್ತು ಪ್ರಾಕೃತಿಕ ಆಚರಣೆಗಳಲ್ಲಿ “ಕಕ್ಕಡ-18” ಕೂಡ ಒಂದಾಗಿದೆ. ನಾಟಿ ಮತ್ತಿತರ ಕೃಷಿ ಕಾರ್ಯದ ಮೂಲಕ ಭೂದೇವಿಗೆ ನಮಿಸುವ ಕೊಡವ ರೈತರು ಪ್ರಕೃತಿದತ್ತವಾಗಿ ದೊರೆಯುವ 18 ವಿವಿಧ ಔಷಧೀಯ ಗುಣ ಹೊಂದಿರುವ ಮದ್ದು ಸೊಪ್ಪಿನಿಂದ ತಯಾರಿಸಿದ ಪಾಯಸ, ಮದ್ದುಪುಟ್ ಸೇರಿದಂತೆ ವಿವಿಧ ಖಾದ್ಯಗಳನ್ನು ಸವಿಯುತ್ತಾರೆ. ಇದು ದೇಹದ ಆರೋಗ್ಯವನ್ನು ಕಾಪಾಡುತ್ತದೆ, ಅಲ್ಲದೆ ಪ್ರಕೃತಿಗೆ ಪೂರಕವಾಗಿ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.
ಕೊಡವ ಪೂರ್ವಜರು ಕೊಡವಭೂಮಿಯಲ್ಲಿ ದೊರೆಯುವ ಪ್ರಾಕೃತಿಕ ಗಿಡಮೂಲಿಕೆಗಳ ಸತ್ವ ಮತ್ತು ಆರೋಗ್ಯವರ್ಧಕ ಶಕ್ತಿಯ ಪರಿಚಯವನ್ನು ಈ ಸಮಾಜಕ್ಕೆ ಬಳುವಳಿಯಾಗಿ ನೀಡಿ ಹೋಗಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಸಿಎನ್‌ಸಿ ಸಂಘಟನೆ ನಡೆಸುತ್ತಿರುವ ಸಾರ್ವತ್ರಿಕ “ಕಕ್ಕಡ-18” ಆಚರಣೆಯಲ್ಲಿ ಸರ್ವ ಕೊಡವ, ಕೊಡವತಿಯರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಪಾಲ್ಗೊಳ್ಳುವಂತೆ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.