ಮಡಿಕೇರಿ ಆ.1 NEWS DESK : ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಗಾಳಿ ಸಹಿತ ಮಹಾಮಳೆಗೆ ಕೊಡಗು ಜಿಲ್ಲೆ ನಲುಗಿ ಹೋಗಿದ್ದು, ಅಪಾರ ನಷ್ಟ ಅನುಭವಿಸಿದೆ. ರಾಜ್ಯ ಸರ್ಕಾರ ತಕ್ಷಣ ಮಳೆಹಾನಿ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಭಾರತೀಯ ಜನತಾ ಪಾರ್ಟಿಯ ವಿರಾಜಪೇಟೆ ಮಂಡಲ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿಯ ವಿರಾಜಪೇಟೆ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಧಿಕ ಮಳೆಯಿಂದ ಬೆಳೆ ಮತ್ತು ಮನೆಗಳು ವ್ಯಾಪಕವಾಗಿ ಹಾನಿಗೀಡಾಗಿದ್ದು, ಸರ್ಕಾರ ತುರ್ತು ಪರಿಹಾರ ಘೋಷಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ನೂರಾರು ಬಡವರ ಮನೆಗಳು ನೆಲಸಮವಾಗಿವೆ. ಅನೇಕ ಮನೆಗಳು ವಾಸಕ್ಕೆ ಯೋಗ್ಯವಿಲ್ಲದಂತೆ ಹಾನಿಗೀಡಾಗಿವೆ. ಹಲವು ಕುಟುಂಬಗಳು ಆಶ್ರಯವಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿವೆ. ಆದರೆ ಸರ್ಕಾರ ಇಲ್ಲಿಯವರೆಗೆ ಎಷ್ಟು ಹಾನಿಗೆ ಎಷ್ಟು ಪ್ರಮಾಣದ ಪರಿಹಾರ ಎನ್ನುವುದನ್ನು ಘೋಷಿಸಿಲ್ಲ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಮನೆ ಸಂಪೂರ್ಣ ಹಾನಿಯಾದರೆ 5ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಶೇ.70 ಕ್ಕಿಂತ ಹೆಚ್ಚು ಹಾನಿಗೀಡಾದ ಮನೆಗಳಿಗೆ 5ಲಕ್ಷ, ಶೇ.40 ಕ್ಕಿಂತ ಹೆಚ್ಚು ಹಾನಿಗೀಡಾದ ಮನೆಗಳಿಗೆ 3ಲಕ್ಷ ರೂ. ನೀಡಬೇಕು. ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಿ ಮನೆಹಾನಿಯ ಸಮಗ್ರ ವರದಿಯನ್ನು ತಯಾರಿಸಬೇಕು. ಮನೆ ಕಳೆದುಕೊಂಡವರಿಗೆ ತುರ್ತಾಗಿ ಮೊದಲ ಹಂತದಲ್ಲಿ ರೂ.50ಸಾವಿರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ದೇಶ ಮತ್ತು ರಾಜ್ಯಕ್ಕೆ ಆರ್ಥಿಕ ಬಲ ನೀಡುತ್ತಿರುವ ಕೊಡಗಿನ ಕಾಫಿ ಬೆಳೆ ಅತಿವೃಷ್ಟಿಯಿಂದ ಸಂಪೂರ್ಣವಾಗಿ ನೆಲಕಚ್ಚಿದೆ. ಕಾಫಿ ಕಾಯಿ ಕೊಳೆತು ಉದುರುತ್ತಿದೆ. ಅನೇಕ ಭಾಗಗಳಲ್ಲಿ ಕಾಫಿ ತೋಟಗಳು ಜಲಾವೃತಗೊಂಡು ನಷ್ಟ ಉಂಟಾಗಿದೆ. ಮುಂದಿನ ವರ್ಷ ಶೇ.25 ರಷ್ಟು ಫಸಲು ಕೂಡ ಕೈಸೇರುವ ಭರವಸೆ ಬೆಳೆಗಾರರಿಗೆ ಇಲ್ಲದಾಗಿದೆ. ಬೆಳೆನಷ್ಟದಿಂದ ಬೆಳೆಗಾರರು ಮಾತ್ರವಲ್ಲದೆ ಕಾರ್ಮಿಕ ಹಾಗೂ ವರ್ತಕ ವರ್ಗ ಕೂಡ ಸಂಕಷ್ಟಕ್ಕೆ ಸಿಲುಕಲಿದೆ. ಕಾಫಿ ಮಾತ್ರವಲ್ಲದೆ ಕಾಳು ಮೆಣಸು, ಏಲಕ್ಕಿ, ಅಡಿಕೆ ಮತ್ತು ಭತ್ತದ ಕೃಷಿಗೂ ಹಾನಿಯಾಗಿದೆ. ಜಿಲ್ಲೆಯ ಕೃಷಿಕರು ಉಪಕಸುಬಾಗಿ ಹಸುಗಳ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಆದರೆ ಇತ್ತೀಚೆಗೆ ಭಾರೀ ಮಳೆಯಿಂದ ವಿದ್ಯುತ್ ತಂತಿಗಳು ಬಿದ್ದು, ವಿದ್ಯುತ್ ಸ್ಪರ್ಷದಿಂದ ಹತ್ತಾರು ಹಸುಗಳು ಮೃತಪಟ್ಟಿವೆ. ಅಲ್ಲದೆ ಹುಲಿ ದಾಳಿಗೂ ಹಸುಗಳು ಬಲಿಯಾಗಿವೆ. ಈ ಎಲ್ಲಾ ಕಾರಣಗಳಿಂದ ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಸರ್ಕಾರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಬೆಳೆ ನಷ್ಟ ಮತ್ತು ಜಾನುವಾರುಗಳ ಸಾವಿನ ಬಗ್ಗೆ ಅಧ್ಯಯನ ನಡೆಸಬೇಕು. ಸೂಕ್ತ ಪರಿಹಾರ ಘೋಷಿಸುವುದರೊಂದಿಗೆ ಬೆಳೆಗಾರರ ಸಾಲಮನ್ನಾ ಮಾಡಬೇಕು ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.
ಅತಿ ಮಳೆಯಿಂದ ಮನೆಹಾನಿ ಮತ್ತು ಬೆಳೆನಷ್ಟದೊಂದಿಗೆ ಜಿಲ್ಲೆಯ ಅನೇಕ ರಸ್ತೆಗಳು, ಸೇತುವೆಗಳು ಹಾಗೂ ವಿದ್ಯುತ್ ಮಾರ್ಗಗಳು ಕಣ್ಮರೆಯಾಗಿವೆ. ಇವುಗಳೆಲ್ಲವನ್ನು ಪುನರ್ ನಿರ್ಮಿಸುವ ಅಗತ್ಯವಿದೆ.
::: ಕಾವೇರಿ ಋಣ :::
ಕಾವೇರಿ ನದಿಯ ಉಗಮಸ್ಥಾನ ಕೊಡಗು ಜಿಲ್ಲೆ ಪ್ರತಿವರ್ಷ ಮಳೆಗಾಲದಲ್ಲಿ ಕಷ್ಟನಷ್ಟಗಳನ್ನು ಅನುಭವಿಸಿ ರಾಜ್ಯ ಹಾಗೂ ಹೊರ ರಾಜ್ಯದ ಕೋಟ್ಯಾಂತರ ಜನರಿಗೆ ನೀರನ್ನು ಒದಗಿಸುತ್ತದೆ. ಆದರೆ ಇದಕ್ಕೆ ಪ್ರತಿಯಾಗಿ ಸರ್ಕಾರದಿಂದ ಕೊಡಗಿಗೆ ಯಾವುದೇ ನೆರವು ದೊರೆಯುತ್ತಿಲ್ಲ. ಈ ಬಾರಿ ಸುರಿದ ಉತ್ತಮ ಮಳೆಯಿಂದ ತಮಿಳುನಾಡಿನೊಂದಿಗೆ ಇದ್ದ ಕಾವೇರಿ ನೀರಿನ ಹಂಚಿಕೆಯ ಸಮಸ್ಯೆಯೂ ಪರಿಹಾರವಾಗಿದೆ. ಇದೆಲ್ಲವನ್ನು ಮನಗಂಡು ಕರ್ನಾಟಕ ಸರ್ಕಾರ ಕೊಡಗು ಜಿಲ್ಲೆಗೆ ತುರ್ತಾಗಿ ಮಳೆಹಾನಿ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಿಸುವುದು ಅನಿವಾರ್ಯವಾಗಿದೆ. ಅಲ್ಲದೆ ಕಾವೇರಿ ನದಿ ನೀರಿನ ಋಣವಾಗಿ ಪ್ರತಿವರ್ಷ ಬಜೆಟ್ ನಲ್ಲಿ “ವಿಶೇಷ ಕೊಡಗು ಪ್ಯಾಕೇಜ್” ಮೀಸಲಿಡಬೇಕೆಂದು ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ.