ನಾಪೋಕ್ಲು ಆ.3 NEWS DESK : ಕೊಡಗಿನಲ್ಲಿ ಕಕ್ಕಡ ತಿಂಗಳ 18ನೇ ದಿನದಂದು ವಿಶೇಷ ಹಬ್ಬದ ದಿನ. ಈ ಹಬ್ಬವು ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಕಕ್ಕಡ-18 ಹಾಗೂ ತುಳು ಭಾಷಿಕರ ಆಟಿ ಆಚರಣೆಯನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಗುತ್ತದೆ. ಕನ್ನಡದಲ್ಲಿ ಬಳಕೆಯಲ್ಲಿರುವ ಆಷಾಡ ಎಂಬ ಪದವೇ ಕೊಡವರ ಕಕ್ಕಡ ಹಾಗೂ ತುಳು ಭಾಷಿಕರ ಆಟಿ ಆಚರಣೆಯಾಗಿದೆ. ಈ ತಿಂಗಳಲ್ಲಿ ಮದ್ದು ಸೊಪ್ಪುವಿನಿಂದ ತಯಾರಿಸಿದ ತಿನಿಸುಗಳಿಗೆ ವಿಶೇಷ ಬೇಡಿಕೆ. ಈ ತಿಂಗಳಲ್ಲಿ ಮದ್ದು ಸೊಪ್ಪು ಎನ್ನುವ ಸಸ್ಯದಲ್ಲಿ-18 ತರಹದ ಔಷಧಿಯು ತುಂಬಿರುತ್ತದೆ ಎಂಬ ನಂಬಿಕೆ. ಅದರಂತೆ ಕಾಡಿನಲ್ಲಿ ಬರೆ ಕರೆಗಳಲ್ಲಿ ಬೆಳೆಯುವ ಈ ಔಷಧ ಗಿಡ 18ನೇ ದಿನದಂದು ಸುವಾಸನೆಯನ್ನು ಬೀರುತ್ತದೆ. ಆಟಿ (ಕಕ್ಕಡ) 18 ರಂದು ಉಪಯೋಗಿಸುವ ಮದ್ದು ಸೊಪ್ಪು ಮಾತ್ರ ತನ್ನದೆ ಆದ ಔಷಧಿಯ ಗುಣವನ್ನು ಹೊಂದಿದೆ ಎಂಬ ನಂಬಿಕೆ ಜನರಲ್ಲಿದೆ.
ಇದು ಗ್ರಾಮೀಣ ಪ್ರದೇಶದ ಜನರು ಬಳಸುವ ಬಲು ಪ್ರಮುಖ ಜೌಷಧಿಯ ಸಸ್ಯ ಎಂದೇ ಪ್ರಚಲಿತ.
ಈ ಸೊಪ್ಪನ್ನು ಕೊಯ್ಯಿದು ತಂದು ತೊಳೆದು ಬೇಯಿಸಿದರೆ ಸಿಗುವ ಕಡುನೇರಳೆ, ನಿಲಿ ಬಣ್ಣಯುಕ್ತ ನೀರಿನಿಂದ ಅಕ್ಕಿಪಾಯಸ, ಹಿಟ್ಟು ಹೀಗೆ ಬಗೆ ಬಗೆಯ ಖಾದ್ಯ ಪದಾರ್ಥಗಳನ್ನು ತಯಾರಿಸುತ್ತಾರೆ, ಪಾಯಸಕ್ಕೆ ತೆಂಗಿನ ಕಾಯಿ ಮತ್ತು ತುಪ್ಪವನ್ನು ಹಾಕಿ ಇದಕ್ಕೆ ಜೇನು ಸೇರಿಸಿ ತಿನ್ನುವದು ರೂಢಿ. ಇದರ ಮೂಲ ಉದ್ದೇಶ ಸಿಹಿಯೊಂದಿಗೆ ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಚಳಿಯಿಂದ ರಕ್ಷಿಸುವುದೇ ಆಗಿದೆ.
ಆಟಿ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಬಿರುಸಿನ ಮಳೆ, ಚಳಿ, ಗಾಳಿಗಳಿಂದ ಕೂಡಿರುವ ಹವಮಾನದಲ್ಲಿ ಮಾನವನ ದೇಹದ ಉಷ್ಣತೆಯ ಸಮತೋಲಕ್ಕಾಗಿ ಏಡಿ, ಮರಕೆಸ, ಕಣಿಲೆ, ಹಣಬೆ ಈ ಎಲ್ಲಾ ಪದಾರ್ಥಗಳನ್ನು ಸೇವಿಸಲಾಗುತ್ತದೆ. ಈ ಎಲ್ಲಾ ಪದಾರ್ಥಗಳು ಮಾನವನ ದೇಹದ ಉಷ್ಣಾಂಶ ಹೆಚ್ಚಿಸಲು ಸಲಹಕಾರಿ. ಹಿಂದಿನ ಕಾಲದ ಹಿರಿಯರು ಯಾವ ತಿನಿಸುಗಳನ್ನು, ಪದಾರ್ಥಗಳನ್ನು ತಯಾರಿಸಿದರೂ ಪೌಷ್ಟಿಕಾಂಶಗಳ ಹಾಗೂ ದೇಹಕ್ಕೆ ಚೈತನ್ಯ ನೀಡುವಂತಹ ವಸ್ತುಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದುದರ ಪರಿಣಾಮವಾಗಿ ಹೆಚ್ಚು ದೃಢಕಾಯರಾಗಿಯು, ಆರೋಗ್ಯವಂತರಾಗಿಯೂ ಇರುತ್ತಿದ್ದರು ಎಂದು ಹೇಳಲಾಗುತ್ತದೆ.
ಈ ಆಚರಣೆಯ ಅಂಗವಾಗಿ ಇತ್ತೀಚಿಗೆ ವಿವಿಧ ಜನಾಂಗದವರು ತಿಂಗಳ ಒಂದು ದಿನದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಎಲ್ಲರೂ ಒಟ್ಟುಗೂಡಿ ಹಬ್ಬದಂತೆ ಆಚರಿಸುತ್ತಾರೆ. ಈ ಹಬ್ಬದಲ್ಲಿ ವಿಶೇಷ ತಿನಿಸುಗಳ ಪ್ರದರ್ಶನ ಸ್ಪರ್ಧೆ ಇರುತ್ತದೆ. ಎಲ್ಲವೂ ಮಳೆಗಾಲದಲ್ಲಿ ಲಭ್ಯವಿರುವ ವಸ್ತುಗಳಿಂದ ತಯಾರಿಸಿದ ಖಾದ್ಯಗಳೇ ಆಗಿರುತ್ತವೆ.
ವರದಿ : ದುಗ್ಗಳ ಸದಾನಂದ.