ಸಿದ್ದಾಪುರ ಆ.3 NEWS DESK : ನೆಲ್ಲಿಹುದಿಕೇರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ 24 ಗಂಟೆಯೂ ಖಾತೆದಾರರ ಸೇವೆಗೆ ಸಿಗುವಂತೆ ಮಾಡಬೇಕು ಮತ್ತು ಸಿಬ್ಬಂದಿಗಳ ಕೊರತೆಯನ್ನು ತುಂಬಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥ ಪಿ.ಆರ್.ಭರತ್ ಮಾತನಾಡಿ, ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮದಲ್ಲಿ ಕೇವಲ ಒಂದು ಬ್ಯಾಂಕ್ ಇದ್ದು, ಇದರ ಎಟಿಎಂ ಯಂತ್ರ ಬ್ಯಾಂಕ್ ನ ಒಳ ಭಾಗದಲ್ಲಿದೆ. ಇದರಿಂದ ಗ್ರಾಹಕರಿಗೆ ಎಟಿಎಂ ಸೇವೆ ಸರಿಯಾಗಿ ದೊರೆಯುತ್ತಿಲ್ಲ. ತಕ್ಷಣ ಎಟಿಎಂ ಯಂತ್ರವನ್ನು ಬ್ಯಾಂಕ್ ನ ಹೊರ ಭಾಗದಲ್ಲಿ ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರಾದ ಅಜೀಜ್ ಮಾತನಾಡಿ, ಬ್ಯಾಂಕಿನಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಗ್ರಾಹಕರಿಗೆ ಸೂಕ್ತ ಸೇವೆ ದೊರೆಯುತ್ತಿಲ್ಲ. ಎಂಟರಿಂದ ಹತ್ತು ಜನ ಸಿಬ್ಬಂದಿಗಳು ಕೆಲಸ ಮಾಡಬೇಕಿರುವ ಬ್ಯಾಂಕ್ ನಲ್ಲಿ ಕೇವಲ ಮೂರರಿಂದ ನಾಲ್ಕು ಮಂದಿ ಇದ್ದಾರೆ. ಕಾರ್ಮಿಕರೇ ಹೆಚ್ಚಿರುವ ಈ ಪ್ರದೇಶದಲ್ಲಿ ಬ್ಯಾಂಕ್ ನ ಕೆಲವು ಅವ್ಯವಸ್ಥೆಯಿಂದಾಗಿ ತೊಂದರೆ ಎದುರಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರು ಮನವಿ ಪತ್ರವನ್ನು ಬ್ಯಾಂಕ್ ನ ವ್ಯವಸ್ಥಾಪಕ ಸಜೇಶ್ ಕುಮಾರ್ ಅವರಿಗೆ ಸಲ್ಲಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ಧನಲಕ್ಷ್ಮಿ, ಸದಸ್ಯರಾದ ಸುಹಾದಾ ಅಶ್ರಫ್, ಮುಸ್ತಫ, ಸಫಿಯಾ, ಅಫ್ಸಲ್, ಸಿಂಧು ಪ್ರಮುಖರಾದ ಉದಯ ಕುಮಾರ್, ಎನ್.ಎಸ್.ವಿಜು, ಸುರೇಂದ್ರನ್ ಬಂಡ್ರಾಣಿ, ಮಣಿ, ಅಯ್ಯೂಬ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.