ಮಡಿಕೇರಿ ಆ.3 NEWS DESK : ತೋಟದ ಕಾರ್ಮಿಕ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಸುಂಟಿಕೊಪ್ಪ ಸಮೀಪದ ಅತ್ತೂರು ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ಲೂರು ತೋಟದಲ್ಲಿ ನಡೆದಿದೆ. ನಲ್ಲೂರು ತೋಟದಲ್ಲಿ ಎಂದಿನಂತೆ ಕಾರ್ಮಿಕರು ತೋಟದ ಕೆಲಸಕ್ಕೆಂದು ತಯಾರಾಗುತ್ತಿದ್ದಾಗ ಮಹಿಳೆ ಮಹದೇವಮ್ಮ ಎಂಬುವವರ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಈ ಸಂದರ್ಭ ಮಹದೇವಮ್ಮ ಕಾಫಿ ಗಿಡದ ಮೇಲೆ ಬಿದ್ದ ಪರಿಣಾಮ ತೊಡೆಭಾಗಕ್ಕೆ ಗಂಭೀರ ಗಾಯವಾಗಿದೆ. ಕಾರ್ಮಿಕರು ಬೊಬ್ಬೆ ಹಾಕಿದ ಸಂದರ್ಭ ಆನೆ ಸ್ಥಳದಿಂದ ಕಾಲ್ಕಿತ್ತಿದೆ. ನಂತರ ಗಾಯಾಳು ಮಹದೇವಮ್ಮ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.










