
ಕುಶಾಲನಗರ NEWS DESK ಆ.4 : ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಮತ್ತು ತಾಲ್ಲೂಕು ಅಧ್ಯಕ್ಷರುಗಳ ನಾಮನಿರ್ದೇಶನದ ಪ್ರಕ್ರಿಯೆ ಇಂದು ಕುಶಾಲನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಡೆಯಿತು. ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ್ ಮೌರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಕಾರ್ಯಕ್ರಮದ ರೂಪುರೇಷೆ ಹಾಗೂ ತಾಲ್ಲೂಕು ಘಟಕಗಳ ಸಮಿತಿಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಜಿಲ್ಲಾ ದಸಾಪ ಉಪಾಧ್ಯಕ್ಷರಾಗಿ ರಾಜೀವ್.ಪಿ, ಕಾರ್ಯದರ್ಶಿ ಡಾ.ಕಾವೇರಿ, ಖಜಾಂಚಿ ಗಿರೀಶ್, ಮಾಧ್ಯಮ ಹಾಗೂ ಪತ್ರಿಕಾ ಸಲಹೆಗಾರರಾಗಿ ಸತೀಶ್ ಕುಮಾರ್, ಕಾನೂನು ಸಲಹೆಗಾರರಾಗಿ ಜಯೇಂದ್ರ, ನಿರ್ದೇಶಕರುಗಳಾಗಿ ಜಯಪ್ಪ ಹಾನಗಲ್, ಮಂಜುಳ ಜೆ.ಕೆ, ರಘುರಾಜ್, ನಾಗರಾಜ್ ಹಾಗೂ ಸರೋಜ ಬಿ.ಡಿ ಅವರುಗಳನ್ನು ಆಯ್ಕೆ ಮಾಡಲಾಯಿತು. ಸಲಹಾ ಮಂಡಳಿಗೆ ಡಾ.ಜೆ.ಸೋಮಣ್ಣ, ವಿ.ಪಿ.ಶಶಿಧರ್, ಕೆ.ಆರ್.ವಿದ್ಯಾಧರ, ರಾಮ್ ಕುಮಾರ್, ರಾಜೇಶ್ ಪದ್ಮನಾಭ ಅವರುಗಳನ್ನು ನಾಮನಿರ್ದೇಶನ ಮಾಡಲು ತೀರ್ಮಾನಿಸಲಾಯಿತು. ಅಕ್ಟೋಬರ್ ತಿಂಗಳಿನಲ್ಲಿ ರಾಯಚೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಪೂರ್ವತಯಾರಿ ಹಾಗೂ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವ ಗಣ್ಯರುಗಳ ಶಿಫಾರಸ್ಸು ಪಟ್ಟಿಯ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಜ್ಞಾನವಾಣಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಡಾ.ಕಾವೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಡಿ.ಪಿ ನಿರೂಪಿಸಿ, ಮಂಜುಳ ಜೆ.ಕೆ ವಂದಿಸಿದರು.








