ಮಡಿಕೇರಿ NEWS DESK ಆ.7 : ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 7 ಆರೋಪಿಗಳನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕುದುಮಾರು ಗ್ರಾಮದ ಕೆ.ರೋಷನ್(32), ಕನ್ಯಾನ ನಿವಾಸಿ ಸತೀಶ್ ರೈ(54), ಪಡೂರು ಗ್ರಾಮದ ಕೆ.ಗಣೇಶ(28), ವೀರಕೆಂಬ ಗ್ರಾಮದ ಕುಸುಮಕರ(39), ವಿರಾಜಪೇಟೆ ಶಿವಕೇರಿಯ ಸೂರ್ಯಪ್ರಸಾದ್ ಬಿ.ಎ(43), ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್ ನಿವಾಸಿ ವಿನೋದ್ ಕುಮಾರ್ ಹೆಚ್.ಪಿ(36) ಹಾಗೂ ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಮದ ಬಿ.ಮೋಹನ್ ಕುಮಾರ್(45) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ಬಳಿಯಿಂದ 3.2 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 2 ಕಾರುಗಳು ಮತ್ತು 9 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಶಾಮೀಲಾದ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
::: ಪ್ರಕರಣದ ಹಿನ್ನೆಲೆ :::
ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಅನುಷಾ ಮಾರ್ಕೆಟಿಂಗ್ ಏಜೆನ್ಸಿ ಹೆಸರಿನ ಅಂಗಡಿಯ ಮಾಲೀಕ ಕಿಬ್ಬೆಟ್ಟ ನಿವಾಸಿ ನೇಮರಾಜ್.ಕೆ.ಎಂ ಅವರು ಜುಲೈ 29ರಂದು ರಾತ್ರಿ 8.45 ಗಂಟೆಗೆ ಪತ್ನಿಯೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭ ದರೋಡೆ ನಡೆದಿತ್ತು. ಕಿಬ್ಬೆಟ್ಟ ರಸ್ತೆಯ ತಿರುವಿನಲ್ಲಿ ಅಪರಿಚಿತ ವ್ಯಕ್ತಿಗಳು ಕಾರು ಮತ್ತು ಬೈಕ್ ನಲ್ಲಿ ಬಂದು ಅಡ್ಡಗಟ್ಟಿ ಮುಖಕ್ಕೆ ಖಾರದ ಪುಡಿ ಎರಚಿ ನೇಮರಾಜ್ ಅವರ ಪತ್ನಿ ಮೇಲೆ ಹಲ್ಲೆ ಮಾಡಿದರು. ನಂತರ ರೂ.6.18 ಲಕ್ಷ ನಗದು ಹಾಗೂ 3 ಮೊಬೈಲ್ ಪೋನ್‌ಗಳಿದ್ದ ಬ್ಯಾಗ್‌ನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ನೇಮರಾಜ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆ ಹಾಕಿದ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ತೀವ್ರ ವಿಚಾರಣೆಗೆ ಒಳಪಡಿಸಿದ ಸಂದರ್ಭ ರೋಷನ್, ಸತೀಶ್ ರೈ, ಗಣೇಶ, ಕುಸುಮಕರ ಎಂಬ ಆರೋಪಿಗಳು ಅಂತರ್ ಜಿಲ್ಲಾ ದರೋಡೆ ಪ್ರಕರಣ, ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ, ಕೊಲೆ ಪ್ರಯತ್ನ, ಅಪಹರಣ ಮುಂತಾದ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಸೋಮವಾರಪೇಟೆ ಡಿವೈಎಸ್‌ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಮುದ್ದು ಮಾದೇವ, ಠಾಣಾಧಿಕಾರಿ ಗೋಪಾಲ, ಸೋಮವಾರಪೇಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳು, ಅಪರಾಧ ಪತ್ತೆ ತಜ್ಞರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.