ಮಡಿಕೇರಿ ಆ.8 NEWS DESK : ಸಂಸ್ಕೃತಿ ಸಿರಿ ಬಳಗ ಟ್ರಸ್ಟ್, ಕೊಡಗು ಮತ್ತು ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಕೊಡಗು ಘಟಕದ ಸಂಯುಕ್ತಾಶ್ರಯದಲ್ಲಿ ಆ.15 ರಂದು ಮಡಿಕೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕವಿಗೋಷ್ಠಿ ಹಾಗೂ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ನಡೆಯಲಿದೆ ಎಂದು ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪೋಲಿಸ್ ಮೈತ್ರಿ ಭವನದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಉಚಿತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ. ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‍ರಾಜ್ ಧ್ವಜಾರೋಹಣ ನೆರವೇರಿಸಿ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಕವಿಗೋಷ್ಠಿ ಮತ್ತು ದೇಶಭಕ್ತಿ ಗಾಯನ ಸ್ಪರ್ಧೆಯನ್ನು ವಿಶೇಷ ಆಹ್ವಾನಿತರು ಹಾಗೂ ತೀರ್ಪುಗಾರರಾದ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕನ್ನಡ ಸರಿಗಮಪ ಖ್ಯಾತಿಯ ಅನ್ವಿತ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು. 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಮ್ಮ ದೇಶದ ಆಂತರಿಕ ಭದ್ರತೆ ನಿರ್ವಹಿಸುತ್ತಿರುವ ಜಿಲ್ಲೆಯ ಪೊಲೀಸ್, ಗೃಹ-ರಕ್ಷಕರು, ಅಗ್ನಿಶಾಮಕ ದಳ ಮತ್ತು ಜಿಲ್ಲಾ ಕಾರಾಗೃಹದ ಅಧಿಕಾರಿ ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ತಪಾಸಣಾ ಶಿಬಿರ, ಸಾರ್ವಜನಿಕರಿಗೆ ಕವಿಗೋಷ್ಠಿ ಹಾಗೂ ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕವಿಗೋಷ್ಠಿಯಲ್ಲಿ ಯಾವುದೇ ವಯೋಮಾನದವರು ಭಾಗವಹಿಸಬಹುದು. ಆಸಕ್ತ ಕವಿ-ಕವಿಯತ್ರಿಯರು ಸ್ವಾತಂತ್ರ್ಯ ದಿನಾಚರಣೆ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಕುರಿತು ರಚಿಸಿದ ತಮ್ಮ ಸ್ವರಚಿತ 20 ಸಾಲುಗಳ ಮಿತಿ ಒಳಗಿನ ಕವಿತೆಯನ್ನು ವಾಚಿಸಬಹುದು. 6ನೇ ತರಗತಿಯಿಂದ 10ನೇ ತರಗತಿಯಲ್ಲಿರುವ ಮಕ್ಕಳಿಗೆ ಹಾಗೂ 18 ವರ್ಷದಿಂದ ಮೇಲ್ಪಟ್ಟವರಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ನಡೆಸಲಾಗುವುದೆಂದು ತಿಳಿಸಿದರು. ವಿಜೇತರಿಗೆ ಪ್ರಶಸ್ತಿ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಕವಿಗಳು ಹಾಗೂ ದೇಶಭಕ್ತಿ ಗೀತೆಯಲ್ಲಿ ಸ್ಪರ್ಧಿಸಿದವರಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಕವನ, ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಆ.13ರ ಒಳಗೆ ಹೆಸರನ್ನು ಮೊ.9740970840 ಹಾಗೂ ಉಚಿತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಶಿಬಿರಕ್ಕೆ ನೋಂದಾಯಿಸಲು ಮತ್ತು ಮಾಹಿತಿಗಾಗಿ ಮೊ.8792874030 ಸಂಪರ್ಕಿಸಬಹುದಾಗಿದೆ ಎಂದರು. ಶಿಬಿರ ಹಾಗೂ ಸ್ಪರ್ಧೆಗಳು ಪೂರ್ಣಗೊಂಡ ನಂತರ ತಮ್ಮ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಡಿಕೇರಿ ತಾಲ್ಲೂಕು ಜನಪದ ಪರಿಷತ್ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಹೆಚ್.ಟಿ.ಅನಿಲ್, ಐಎಂಒ ಕೊಡಗು ಘಟಕ ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ ಪಾಲ್ಗೊಳ್ಳಲಿದ್ದಾರೆ. ಸಂಸ್ಕೃತಿ ಸಿರಿ ಬಳಗದ ಟ್ರಸ್ಟಿಗಳಾದ ಮಡಿಕೇರಿಯ ಸಮಾಜ ಸೇವಕ ಕೆ.ಎಂ.ಗಣೇಶ್, ಸಿನಿಮಾ ನಿರ್ಮಾಪಕಿ ಹಾಗೂ ನಿರ್ದೇಶಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಮೇಚಿರ ರವಿಶಂಕರ್ ನಾಣಯ್ಯ, ಹೈಕೋರ್ಟ್ ವಕೀಲರಾದ ಆನೇಡ ಹರೀಶ್ ಗಣಪತಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ, ಡಾ. ರಾಘವನ್ ಹಾಗೂ ಡಾ.ಮೋಹನ್ ಅಪ್ಪಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹರಿಣಿ ವಿಜಯ್ ಮಾಹಿತಿ ನೀಡಿದರು. ಸಂಸ್ಕೃತಿ ಸಿರಿ ಬಳಗ ಟ್ರಸ್ಟ್‍ನ ಟ್ರಸ್ಟಿ ಹಾಗೂ ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಕೊಡಗು ಘಟಕದ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ ಮಾತನಾಡಿ, ಶಿಬಿರದಲ್ಲಿ ಕಿವಿ, ಮೂಗು, ಗಂಟಲು ಮತ್ತು ಕುತ್ತಿಗೆಗೆ ಸಂಬಂಧಿಸಿದ ಕಾಯಿಲೆಗಳ ಶಸ್ತ್ರಚಿಕಿತ್ಸೆ, ಶ್ರವಣ ಪರೀಕ್ಷೆ, ಕಣ್ಣಿನ ದೃಷ್ಟಿ ತಪಾಸಣೆ, ದಂತ ತಪಾಸಣೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಶ್ವಾಸಕೋಶ ತಜ್ಞರು, ಜನರಲ್ ಮೆಡಿಸಿನ್, ಮೂಳೆ ತಜ್ಞರು, ಸ್ತ್ರೀರೋಗ ತಜ್ಞರು, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ತಜ್ಞರು, ಮಕ್ಕಳ ತಜ್ಞರು, ಉಚಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣೆ, ಅರಿವಳಿಕೆ ತಜ್ಞರು, ಹೃದ್ರೋಗ ತಜ್ಞರ ಸಮಾಲೋಚನೆಗಳನ್ನು ಒಳಗೊಂಡಿರುತ್ತದೆ ಎಂದರು. ಅಲ್ಲದೆ ಉಚಿತ ಲ್ಯಾಬ್ ಪರೀಕ್ಷೆಗಳು (ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣೆ), ಎಕೋ ಮತ್ತು ಇ.ಸಿ.ಜಿ.ಯನ್ನು ಅಗತ್ಯವಿರುವ ರೋಗಿಗಳಿಗೆ ಮಾಡಲಾಗುತ್ತದೆ, ಉಚಿತ ಔಷಧಿ ವಿತರಣೆ, ಇ.ಎನ್.ಟಿ. ತಪಾಸಣೆ ನಡೆಯಲಿದ್ದು, ಚಿಕಿತ್ಸೆ ಅಗತ್ಯವಿರುವ ರೋಗಿಗಳ ಬಗ್ಗೆ ಮುಂದಿನ ಆರು ತಿಂಗಳವರೆಗೆ ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಕೊಡಗು ಘಟಕದ ವಿದ್ಯಾರ್ಥಿಗಳು ನಿಗಾವಹಿಸುತ್ತಾರೆ ಮತ್ತು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ಚಿಕಿತ್ಸೆಯನ್ನು ನೀಡಲಾಗುವುದು. ಅಗತ್ಯವಿರುವ ರೋಗಿಗಳಿಗೆ ಉಚಿತ ಸಾಮಾನ್ಯ ಶಸ್ತ್ರಚಿಕಿತ್ಸೆಯನ್ನು ನಡೆಸಿಕೊಡಲಾಗುವುದು ಎಂದು ತಿಳಿಸಿದರು. ನ್ಯಾಷನಲ್ ಮೆಡಿಕೋಸ್ ಸಂಸ್ಥೆ ಕೊಡಗು ಘಟಕ, ಕೊಡಗು ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಶಿಬಿರಕ್ಕೆ ಬರುವವರು ಹಳೆಯ ವೈದ್ಯಕೀಯ ಚೀಟಿ ಮತ್ತು ಆಧಾರ್ ಕಾರ್ಡ್ ತರುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬಳಗದ ಟ್ರಸ್ಟಿಗಳಾದ ಕೆ.ಎಂ.ಗಣೇಶ್, ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ ಉಪಸ್ಥಿತರಿದ್ದರು.