ಮಡಿಕೇರಿ ಆ.8 NEWS DESK : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 41ನೇ ರಾಜ್ಯ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಮರ್ಕರ ಟೆಕ್ವಾಂಡೋ ಕ್ಲಬ್‍ನ ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಕೊಡಗು ವಿದ್ಯಾಲಯ ಶಾಲೆಯ ದಕ್ಷ್, ಹರ್ಷ್ ಕರುಂಬಯ್ಯ ಚಿನ್ನ, ಎನ್.ಕೆ.ಪ್ರಜ್ಞಾ, ಎನ್.ಕೆ.ದಿವಿತ್, ದಾನೀಶ್, ಆಯಾನ್ ಕಾನ್ ಬೆಳ್ಳಿ ಹಾಗೂ ಡಿಶಾಂತ್, ಪಾವನಿ, ಕ್ರಿಶ್, ಸಾದ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಸಂತ ಮೈಕಲರ ಶಾಲೆಯ ಆರೂಷ್, ಅನನ್ಯ ಬೆಳ್ಳಿ, ಸಂತ ಜೋಸೆಫರ ಶಾಲೆಯ ಅನಿಯಾ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‍ನ ಮಾಸ್ಟರ್ ಕುಶಾಲ್ ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದು ಆಯ್ಕೆಯಾದ ವಿದ್ಯಾರ್ಥಿಗಳು ಆ.27 ರಿಂದ 29ರ ವರೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ವತಿಯಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ 3ನೇ ಕರ್ನಾಟಕ ಮಿನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕೊಡಗನ್ನು ಪ್ರತಿನಿಧಿಸಲಿದ್ದಾರೆ.ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸರ್ಕಾರದ ಶಿಷ್ಯವೇತನ ಮತ್ತು ಸರ್ಕಾರದ ಎಲ್ಲಾ ಕ್ರೀಡಾ ಸೌಲಭ್ಯಗಳು ದೊರೆಯಲಿದೆ ಎಂದು ಟೆಕ್ವಾಂಡೋ ಕ್ಲಬ್ ನ ಮಾಸ್ಟರ್ ಕುಶಾಲ್ ಕುಮಾರ್ ತಿಳಿಸಿದ್ದಾರೆ.










