ಸಿದ್ದಾಪುರ ಆ.10 NEWS DESK : ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ವಿರಾಜಪೇಟೆ ವಲಯ ಅರಣ್ಯ ಇಲಾಖೆ ಮತ್ತು ಸಿದ್ದಾಪುರದ ಬಿ.ಜಿ.ಎಸ್.ಪಬ್ಲಿಕ್ ಶಾಲೆ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಾನವನ ಸ್ವಯಂ ಕೃತ ಅಪರಾಧಗಳಿಂದ ಪ್ರಾಕೃತಿಕ ದುರಂತಗಳು ಸಂಭವಿಸುತ್ತಿದೆ. ಪರಿಸರವನ್ನು ನಾವು ಸಂರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ವನಮಹೋತ್ಸವ ಕೇವಲ ಗಿಡ ನೆಡುವುದಕ್ಕೆ ಸೀಮಿತವಾಗದೆ ಅದನ್ನು ಪೋಷಿಸಲು ಮುಂದಾಗಬೇಕೆಂದು ಹೇಳಿದ ಅವರು, ಪ್ರತಿಯೊಬ್ಬರೂ ಮನೆಯ ಅಂಗಳದಲ್ಲಿ ಸಸಿ ನೆಟ್ಟು ಸಂರಕ್ಷಿಸಬೇಕು. ಈ ದಿಸೆಯಲ್ಲಿ ಗಿಡಮರ ಉಳಿಸಿ ಪರಿಸರ ಸಂರಕ್ಷಣೆ ಮಾಡಬೇಕು. ಗಿಡಮರಗಳನ್ನು, ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತಾಲೂಕಿನ ಪತ್ರಕರ್ತರ ಸಂಘ ಕೇವಲ ವರದಿಗಾರಿಕೆ ಮಾತ್ರವಲ್ಲದೆ ಹಲವಾರು ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರರು. ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಜಿತ್ ಕುಮಾರ್ ಗುಹ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಶಿಸಿ ಹೋಗುತ್ತಿರುವ ನಮ್ಮ ಪರಿಸರವನ್ನು ಉಳಿಸಿ, ಬೆಳೆಸಬೇಕಾಗಿರುವುದು ಎಲ್ಲರ ಜವಬ್ದಾರಿಯಾಗಿದೆ ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ನೆನಪಿಗಾಗಿ ಗಿಡವನ್ನು ನೆಟ್ಟು ಬೆಳೆಸಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಿಸಿ, ವಿದ್ಯಾರ್ಥಿ ಜೀವನದಿಂದಲೇ ಪರಿಸರ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿ ಶಿವರಾಮ್, ಡಿಆರ್‌ಎಫ್‌ಒ ದೇಯಂಡ ಸಂಜಿತ್ ಸೋಮಯ್ಯ, ಅರುಣ್, ಬಿ.ಜಿ.ಎಸ್. ಪಬ್ಲಿಕ್ ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ್, ಕಾಲೇಜು ಪ್ರಾಂಶುಪಾಲರಾದ ಕಳೇಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ, ಸದಸ್ಯರಾದ ವಾಸು, ಸುಬ್ರಮಣಿ, ಎಂ.ಎ.ಕೃಷ್ಣ, ಆಂಟೋಣಿ, ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ತೇಜಸ್ ಪಾಪಯ್ಯ, ಪರಿಸರ ಪ್ರೇಮಿ ರಾಜೇಂದ್ರ ಸಿಂಗ್, ಶಾಲಾ ಶಿಕ್ಷಕರು ಅರಣ್ಯ ಇಲಾಖೆ ಆರ್.ಆರ್.ಟಿ ಸಿಬ್ಬಂದಿಗಳು ಹಾಜರಿದ್ದರು.









